ಮಧುಮೇಹಕ್ಕೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಏನು ಸಂಬಂಧ?

Update: 2020-11-28 13:30 GMT

ಮಾನಸಿಕ ಆರೋಗ್ಯ ಸಮಸ್ಯೆಗಳು ಮಧುಮೇಹದೊಂದಿಗೆ ಹೇಗೆ ಗುರುತಿಸಿಕೊಂಡಿವೆ? ಮಧುಮೇಹವು ರೋಗಿಯ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಿಸುವ ಕಾಯಿಲೆಯಾಗಿದೆ. ಟೈಪ್-1 ಮಧುಮೇಹದಲ್ಲಿ ಶರೀರವು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ ಮತ್ತು ಟೈಪ್-2ದಲ್ಲಿ ಮೇದೋಜ್ಜೀರಕ ಗ್ರಂಥಿಯು ಕೊಂಚ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆಯಾದರೂ ಅದು ಶರೀರಕ್ಕೆ ಸಾಕಾಗುವಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಮಧುಮೇಹಿಗಳು ತಾವು ಮಾನಸಿಕ ಆರೋಗ್ಯವಂತರಾಗಿರಲೂ ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಧುಮೇಹದೊಂದಿಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ನೀಡುವುದು ಅಗತ್ಯ ಎನ್ನುವುದು ನಿಮಗೆ ಗೊತ್ತೇ? ಇದೇ ಕಾರಣದಿಂದ ಒತ್ತಡ ಮತ್ತು ಆತಂಕಗಳಿಂದ ದೂರವಿರುವಂತೆ ವೈದ್ಯರು ಮಧುಮೇಹಿಗಳಿಗೆ ಸಲಹೆ ನೀಡುತ್ತಿರುತ್ತಾರೆ. ಒತ್ತಡದ ಸಮಯದಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಏರಿಳಿತಗಳಾಗುತ್ತವೆ.

 ಟೈಪ್-1 ಮತ್ತು ಟೈಪ್-2 ಮಧುಮೇಹದಿಂದ ಬಳಲುತ್ತಿರುವವರು ಒತ್ತಡದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಮಧುಮೇಹಿಗಳಲ್ಲಿ ಒತ್ತಡಕ್ಕೆ ಸಿಲುಕುವ ಅಪಾಯವು ಇತರರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ ಎನ್ನುವುದು ನಿಮಗೆ ಗೊತ್ತೇ? ಮಧುಮೇಹಿಗಳು ತಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಏರಿಕೆ ಅಥವಾ ಕುಸಿತದ ಬಗ್ಗೆ ಆಗಾಗ್ಗೆ ಚಿಂತೆ ಪಡುತ್ತಿರುತ್ತಾರೆ ಮತ್ತು ಇದರಿಂದಾಗಿ ತಮ್ಮ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಗಮನ ವಹಿಸಲು ಆರಂಭಿಸುತ್ತಾರೆ. ಅಲ್ಲದೆ ನಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಬದಲಾವಣೆಯುಂಟಾದಾಗ ಅದು ನಮ್ಮ ಮನಃಸ್ಥಿತಿಯ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಮಧುಮೇಹದಿಂದ ಉಂಟಾಗುವ ಒತ್ತಡವನ್ನು ‘ಡಯಾಬಿಟಿಕ್ ಡಿಸ್ಟ್ರೆಸ್ ’ ಎಂದು ಕರೆಯಲಾಗುತ್ತದೆ. ಮಧುಮೇಹಿಗಳು ಸದಾ ತಮ್ಮ ಸಕ್ಕರೆಯ ಮಟ್ಟದ ಬಗ್ಗೆ ಚಿಂತಿಸುತ್ತಿದ್ದರೆ ಅದು ಒತ್ತಡವಾಗಿ ಬದಲಾಗುತ್ತದೆ.

ಶೇ.33ರಷ್ಟು ಮಧುಮೇಹ ರೋಗಿಗಳು ‘ ಡಯಾಬಿಟಿಕ್ ಡಿಸ್ಟ್ರೆಸ್ ’ ಅನ್ನು ಅನುಭವಿಸುತ್ತಿರುತ್ತಾರೆ ಎನ್ನುವುದು ನಿಮಗೆ ಗೊತ್ತೇ? ಇಂತಹ ಒತ್ತಡಕ್ಕೆ ಔಷಧಿಯ ಮೂಲಕ ಚಿಕಿತ್ಸೆ ಸಾಧ್ಯವಿಲ್ಲ ಎನ್ನುವುದು ಕಳವಳಕಾರಿ ವಿಷಯವಾಗಿದೆ. ತಜ್ಞರ ಅಭಿಪ್ರಾಯದಂತೆ ಟಾಕ್ ಥೆರಪಿ ಅಥವಾ ವಾಕ್ ಚಿಕಿತ್ಸೆಯ ಮೂಲಕ ರೋಗಿಗಳು ತಮ್ಮ ಮಧುಮೇಹ ನಿರ್ವಹಣೆಯನ್ನು ಸುಧಾರಿಸಿಕೊಳ್ಳಬಹುದು. ತನ್ಮಧ್ಯೆ ಸಪೋರ್ಟ್ ಗ್ರೂಪ್‌ಗಳು ಅಥವಾ ಬೆಂಬಲ ಗುಂಪುಗಳೂ ಒತ್ತಡವನ್ನು ಕಡಿಮೆ ಮಾಡಲು ನೆರವಾಗಬಲ್ಲವು.

ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯ ಎನ್ನುವುದನ್ನು ಮರೆಯಬಾರದು. ನೀವು ನಿಮ್ಮ ಶರೀರದ ನೋಟ ಮತ್ತು ಆಹಾರ ಸೇವನೆ ಅಭ್ಯಾಸಗಳ ಬಗ್ಗೆ ವಹಿಸುವಷ್ಟೇ ಕಾಳಜಿಯನ್ನು ಮಾನಸಿಕ ಆರೋಗ್ಯದ ಬಗ್ಗೆಯೂ ವಹಿಸಬೇಕಾಗುತ್ತದೆ.

ಮಧುಮೇಹ ಮತ್ತು ಒತ್ತಡ ಇವೆರಡನ್ನೂ ಸುಲಭವಾಗಿ ಎದುರಿಸಬಹುದು ಮತ್ತು ಎರಡಕ್ಕೂ ಚಿಕಿತ್ಸೆ ಲಭ್ಯವಿದೆ. ಇದಕ್ಕಾಗಿ ನೀವು ನಿಮ್ಮ ವೈದ್ಯರಿಂದ ನಿಮ್ಮ ಮನಸ್ಸು ಮತ್ತು ಶರೀರವನ್ನು ಹೇಗೆ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಸಲಹೆಯನ್ನು ಪಡೆಯಬಹುದು. ಅಲ್ಲದೆ ನೀವು ಒತ್ತಡಕ್ಕೆ ಸುಲಭವಾಗಿ ಗುರಿಯಾಗುತ್ತೀರಿ ಎಂದು ನಿಮಗೆ ಅನ್ನಿಸುತ್ತಿದ್ದರೆ ಇದಕ್ಕಾಗಿ ಮನೋವೈದ್ಯರನ್ನು ಭೇಟಿಯಾಗಿ ಸಮಾಲೋಚಿಸಬಹುದು. ಅವರು ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಒಳ್ಳೆಯ ಸಲಹೆಗಳನ್ನು ನೀಡಬಲ್ಲರು.

ಮಧುಮೇಹಿಗಳಿಗೆ ಕೆಲವು ಟಿಪ್ಸ್

ಇಂದಿನ ದಿನಗಳಲ್ಲಿ ಮಧುಮೇಹವು ಹೆಚ್ಚು ಸಾಮಾನ್ಯವಾಗಿದೆ ಮತ್ತು ಅದು ನೇರವಾಗಿ ನಮ್ಮ ಜೀವನಶೈಲಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎನ್ನುವುದು ನಮಗೆ ಗೊತ್ತು. ನಿಮಗೆ ಮಧುಮೇಹವಿದ್ದರೆ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಲಕ್ಷ್ಯವನ್ನು ನೀಡುವುದು ಅಗತ್ಯವಾಗುತ್ತದೆ.

ನೀವು ನಿಮ್ಮ ದಿನಚರಿಯ ಜೊತೆಗೆ ಅನಾರೋಗ್ಯಕರ ಆಹಾರ ಸೇವನೆಯ ಅಭ್ಯಾಸಗಳನ್ನು ಬಿಡಬೇಕಾಗುತ್ತದೆ. ನೀವು ಮಧುಮೇಹ ತಜ್ಞರನ್ನು ಭೇಟಿಯಾದರೆ ಅವರು ನಿಮಗೆ ಲಾಭವನ್ನುಂಟು ಮಾಡುವ ಬೇರೆಯದೇ ಆದ ಆಹಾರಕ್ರಮವನ್ನೂ ಸೂಚಿಸುತ್ತಾರೆ.

ಮಧುಮೇಹಿಗಳು ಸಿಹಿತಿಂಡಿಗಳು,ಸಕ್ಕರೆ ಭರಿತ ಆಹಾರಗಳು ಮತ್ತು ಮದ್ಯದಿಂದ ದೂರವಿರಬೇಕು. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಆಗಾಗ್ಗೆ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News