ಗೆಹ್ಲೋಟ್ ಸರಕಾರವನ್ನು ಬೆಂಬಲಿಸಲು ಇಬ್ಬರು ಬಿಟಿಪಿ ಶಾಸಕರು ಹಣ ಪಡೆದಿದ್ದರು: ರಾಜಸ್ಥಾನ ಬಿಜೆಪಿ ಆರೋಪ

Update: 2020-11-28 15:42 GMT

ಜೈಪುರ,ನ.28: ಗೆಹ್ಲೋಟ್ ಸರಕಾರವನ್ನು ಬೆಂಬಲಿಸಲು ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ)ಯ ಇಬ್ಬರು ಶಾಸಕರು ತಲಾ 10 ಕೋ.ರೂ.ಗಳನ್ನು ಪಡೆದಿದ್ದರು ಎಂದು ಕಾಂಗ್ರೆಸ್ ಶಾಸಕ ಮಹೇಂದ್ರಜಿತ್ ಸಿಂಗ್ ಮಾಳವೀಯ ಅವರು ಆರೋಪಿಸಿರುವ ವೀಡಿಯೊವನ್ನು ರಾಜಸ್ಥಾನ ಬಿಜೆಪಿಯ ಅಧ್ಯಕ್ಷ ಸತೀಶ್ ಪೂನಿಯಾ ಅವರು ಶುಕ್ರವಾರ ಟ್ವೀಟಿಸಿದ್ದಾರೆ.

ಈ ವೀಡಿಯೊ ಸಾರ್ವಜನಿಕ ಸಭೆಯೊಂದರಲ್ಲಿ ಮಾಳವೀಯ ಅವರು ಈ ಇಬ್ಬರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಸರಕಾರವನ್ನು ಬೆಂಬಲಿಸಲು ತಲಾ ಐದು ಕೋ.ರೂ. ಮತ್ತು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರದ ಬೆನ್ನಿಗೆ ನಿಲ್ಲಲು ತಲಾ ಐದು ಕೋ.ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸುತ್ತಿರುವ ದೃಶ್ಯವನ್ನು ಒಳಗೊಂಡಿದೆ.

ಜೂನ್‌ನಲ್ಲಿ ರಾಜ್ಯಸಭಾ ಚುನಾವಣೆಗಳ ಮತ್ತು ಬಳಿಕ ಜುಲೈನಲ್ಲಿ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬಂಡಾಯದ ಸಂದರ್ಭಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಹೋಟೆಲ್‌ಗಳಲ್ಲಿ ಇರಿಸಿದ್ದಾಗ ತಾನು ಎತ್ತಿದ್ದ ಪ್ರಶ್ನೆಗಳನ್ನು ಮಾಳವೀಯ ದೃಢಪಡಿಸಿದ್ದಾರೆ ಎಂದು ಹೇಳಿರುವ ಪೂನಿಯಾ,ಈ ಕುದುರೆ ವ್ಯಾಪಾರದ ಮೇಲೆ ಬೆಳಕು ಚೆಲ್ಲುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಆಗ್ರಹಿಸಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ಬಿಟಿಪಿ ಶಾಸಕರು ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿದ್ದರು.

ಮಾಳವೀಯ ಬಡಿದೋರಾ ಶಾಸಕರಾಗಿದ್ದರೆ,ಬಿಟಿಪಿ ಶಾಸಕರಾಗಿರುವ ರಾಮಪ್ರಸಾದ ದಿಂಡೋರ್ ಅವರು ಸಗ್ವಾರಾ ಮತ್ತು ರಾಜಕುಮಾರ ರೋತ್ ಅವರು ಚೋರಾಸಿ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News