ಛತ್ತೀಸ್‌ಗಡದ ಮಾಜಿ ಐಎಎಸ್ ಅಧಿಕಾರಿಯ 27.86 ಕೋ.ರೂ.ಆಸ್ತಿ ಜಪ್ತಿ ಮಾಡಿದ ಈ.ಡಿ.

Update: 2020-11-28 16:43 GMT

ಹೊಸದಿಲ್ಲಿ,ನ.28: ಛತ್ತೀಸ್‌ಗಡದ ಮಾಜಿ ಐಎಎಸ್ ಅಧಿಕಾರಿ ಬಾಬುಲಾಲ ಅಗರವಾಲ್ ಅವರ 27.86 ಕೋ.ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಈ.ಡಿ.)ವು ಜಪ್ತಿ ಮಾಡಿದೆ.

ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತು ಗಳಿಕೆ ಆರೋಪಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಗರವಾಲ್,ಅವರ ಕುಟುಂಬ ಸದಸ್ಯರು ಮತ್ತು ಇತರರನ್ನು ಈ.ಡಿ. ತನಿಖೆಗೊಳಪಡಿಸಿದೆ.

ಜಪ್ತಿ ಮಾಡಲಾಗಿರುವ ಆಸ್ತಿಗಳಲ್ಲಿ 26.16 ಕೋ.ರೂ.ಮೌಲ್ಯದ ಕೈಗಾರಿಕಾ ಘಟಕ ಮತ್ತು ಯಂತ್ರೋಪಕರಣಗಳು,291 ಬ್ಯಾಂಕ್ ಖಾತೆಗಳಲ್ಲಿದ್ದ 20.43 ಲ.ರೂ.,ಕುಟುಂಬದ ಒಡೆತನದ ಎಕ್ಸ್‌ಪ್ರೆಸ್ ಮೈನಿಂಗ್ ಪ್ರೈ.ಲಿ.ನ ಹೆಸರಿನಲ್ಲಿರುವ 39.52 ಲ.ರೂ.ಮೌಲ್ಯದ ವಸತಿ ನಿವೇಶನ ಮತ್ತು ಆದಾಯ ತೆರಿಗೆ ಇಲಾಖೆಯ ಶೋಧ ಕಾರ್ಯಾಚರಣೆ ಸಂದರ್ಭ ವಶಪಡಿಸಿಕೊಳ್ಳಲಾಗಿದ್ದ 15 ಲ.ರೂ.ನಗದು ಹಣ ಸೇರಿವೆ ಎಂದು ಈ.ಡಿ.ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

1988ರ ತಂಡದ ಐಎಎಸ್ ಅಧಿಕಾರಿ ಅಗರವಾಲ್ ಅವರನ್ನು ಈ.ಡಿ.ನ.9ರಂದು ರಾಯಪುರದ ನಿವಾಸದಿಂದ ಬಂಧಿಸಿದ್ದು, ಅವರಿಗೆ ಡಿ.5ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಛತ್ತೀಸ್‌ಗಡ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅಗರವಾಲ್ ಈ ಹಿಂದೆ ಭ್ರಷ್ಟಾಚಾರದ ಆರೋಪಗಳಲ್ಲಿ ಸಿಬಿಐನಿಂದಲೂ ಬಂಧಿತರಾಗಿದ್ದರು. ಬಂಧನದ ಬಳಿಕ ರಾಜ್ಯ ಸರಕಾರವು ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ಅಗರವಾಲ್ 2010ರಲ್ಲಿ ರಾಜ್ಯ ಸರಕಾರದಲ್ಲಿ ಆರೋಗ್ಯ ಕಾರ್ಯದರ್ಶಿಯಾಗಿದ್ದಾಗ ತನ್ನ ವಿರುದ್ಧ ದಾಖಲಾಗಿದ್ದ ಆರೋಪಗಳ ಕುರಿತು ಸಿಬಿಐ ತನಿಖೆಯನ್ನು ‘ಇತ್ಯರ್ಥ ’ಮಾಡಿಕೊಳ್ಳಲು ಬಯಸಿದ್ದರು ಎಂದು ಆರೋಪಿಸಲಾಗಿತ್ತು.

2010ರಲ್ಲಿ ಛತ್ತೀಸ್‌ಗಡ ಭ್ರಷ್ಟಾಚಾರ ನಿಗ್ರಹ ಘಟಕ ಮತ್ತು ಸಿಬಿಐ ದಾಖಲಿಸಿಕೊಂಡಿದ್ದ ಎಫ್‌ಐಆರ್ ಅನ್ನು ಪರಿಶೀಲಿಸಿದ ಬಳಿಕ ಈ.ಡಿ. ಅಗರವಾಲ್,ಅವರ ಲೆಕ್ಕ ಪರಿಶೋಧಕ ಸುನಿಲ್ ಅಗರವಾಲ್ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನ್ನ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿತ್ತು.

ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಅಗರವಾಲ್ ಕುಟುಂಬದ ಎರಡು ಸಂಸ್ಥೆಗಳಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿನ 4.75 ಲ.ರೂ.,10.25 ಲ.ರೂ. ಮೌಲ್ಯದ ವಸತಿ ನಿವೇಶನ,39.81 ಲ.ರೂ.ನಗದು ಹಣ ಮತ್ತು ಎರಡು ಕೆ.ಜಿ.ಚಿನ್ನವೂ ಸೇರಿವೆ ಎಂದು ಈ.ಡಿ.ತಿಳಿಸಿದೆ.

ಅಗರವಾಲ್ ವಿಶ್ವ ಬ್ಯಾಂಕ್ ನೆರವಿನ ಮಲೇರಿಯಾ ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಟೆಂಡರ್‌ಗಳನ್ನು ವಿಭಜಿಸಿ ಅವುಗಳನ್ನು ಅಸಿತ್ವದಲ್ಲಿಯೇ ಇರದಿದ್ದ ಕೆಲವು ಸಂಸ್ಥೆಗಳಿಗೆ ನೀಡುವ ಮೂಲಕ ಸರಕಾರಿ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ ಎಂದು ಈ.ಡಿ.ತಿಳಿಸಿದೆ.

ಈ.ಡಿ.ಹಿಂದೆಯೂ ಅಗರವಾಲ್‌ಗೆ ಸೇರಿದ 36.09 ಕೋ.ರೂ.ಗಳ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಪ್ರಕರಣದಲ್ಲಿ ಸುನಿಲ್ ಅಗರವಾಲ್ ಅವರನ್ನೂ ಈ.ಡಿ.ಈ ಹಿಂದೆ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News