ದಿಲ್ಲಿ ಗಡಿಯಲ್ಲೇ ಪ್ರತಿಭಟನೆ ಮುಂದುವರಿಸಲು ರೈತ ಸಂಘಗಳ ನಿರ್ಧಾರ

Update: 2020-11-28 17:38 GMT

ಹೊಸದಿಲ್ಲಿ, ನ.28: ಕೇಂದ್ರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ಪ್ರತಿಭಟನೆ ನಡೆಸಲು ಪೊಲೀಸರು ಸೂಚಿಸಿದ ಸ್ಥಳಕ್ಕೆ ತೆರಳಲು ನಿರಾಕರಿಸಿದ್ದು ಸತತ ಮೂರನೇ ದಿನವಾದ ಶನಿವಾರವೂ ದಿಲ್ಲಿ ಗಡಿಯ ಸಿಂಘು ಮತ್ತು ಟಿಕ್ರಿಯಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.

ದಿಲ್ಲಿಯ ಅತ್ಯಂತ ದೊಡ್ಡ ಮೈದಾನಗಳಲ್ಲಿ ಒಂದಾಗಿರುವ ಉತ್ತರ ದಿಲ್ಲಿಯ ಸಂತ ನಿರಂಕಾರಿ ಮೈದಾನದಲ್ಲಿ ಪ್ರತಿಭಟನೆ ಮುಂದುವರಿಸುವಂತೆ ದಿಲ್ಲಿಯ ಜಂಟಿ ಪೊಲೀಸ್ ಆಯುಕ್ತ ಸುರೇಂದ್ರ ಸಿಂಗ್ ಯಾದವ್ ರೈತರಲ್ಲಿ ಮನವಿ ಮಾಡಿಕೊಂಡರು. ಸುಮಾರು 600ರಿಂದ 700ರಷ್ಟು ರೈತರು ಮನವಿಗೆ ಕಿವಿಗೊಟ್ಟು ನಿರಂಕಾರಿ ಮೈದಾನಕ್ಕೆ ತೆರಳಿದ್ದಾರೆ. ಇನ್ನೂ ಕೆಲವು ರೈತರು ತೆರಳುವ ನಿರೀಕ್ಷೆಯಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶನಿವಾರ ಪಂಜಾಬ್ ಮತ್ತು ಹರ್ಯಾಣದ ಇನ್ನಷ್ಟು ರೈತರು ಸೇರಿದ್ದು ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ರೈತರ ಮುಖಂಡರು ಹೇಳಿದ್ದಾರೆ. ಜಂಥರ್‌ಮಂಥರ್‌ನಲ್ಲಿ ಶಾಂತರೀತಿಯಲ್ಲಿ ಪ್ರತಿಭಟನೆ ಮುಂದುವರಿಸಲು ಬಯಸಿದ್ದೇವೆ. ಮುಂದಿನ ಕಾರ್ಯತಂತ್ರ ನಿರ್ಧರಿಸುವವರೆಗೆ ಗಡಿಭಾಗದಲ್ಲೇ ಪ್ರತಿಭಟನೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ. ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿ(ಕೆಎಂಎಸ್‌ಸಿ) ಬ್ಯಾನರ್‌ನಡಿ ನಡೆಯುತ್ತಿರುವ ಪ್ರತಿಭಟನೆಗೆ ಶನಿವಾರ ಹರ್ಯಾಣದಿಂದ ಇನ್ನೂ ಹಲವು ರೈತರು ಸೇರ್ಪಡೆಗೊಂಡಿದ್ದಾರೆ. ಟ್ರಾಕ್ಟರ್, ಟ್ರಾಲಿಗಳಲ್ಲಿ ಅಮೃತಸರದಿಂದ ಜಾಥಾ ಆರಂಭಿಸಿರುವ ಕೆಎಂಎಸ್‌ಸಿ ಸದಸ್ಯರು ಶೀಘ್ರವೇ ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸೇರಲಿದ್ದಾರೆ ಎಂದು ಕೆಎಂಎಸ್‌ಸಿ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆಗೊಂಡ 3 ಕೃಷಿ ಮಸೂದೆಗಳನ್ನು ವಿರೋಧಿಸಿರುವ ಪಂಜಾಬ್ ಮತ್ತು ಹರ್ಯಾಣದ ರೈತರು, ಈ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ನವೆಂಬರ್ 25ರಂದು ದಿಲ್ಲಿಗೆ ಜಾಥಾ ಆರಂಭಿಸಿದ್ದರು. ಶುಕ್ರವಾರ ದಿಲ್ಲಿ ಗಡಿಭಾಗದಲ್ಲಿ ಪೊಲೀಸರ ಬ್ಯಾರಿಕೇಡ್ ಮುರಿದು ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿತ್ತು. ದಿಲ್ಲಿ ಚಲೋ ಪ್ರತಿಭಟನೆ ಮುಂದುವರಿಸಿಯೇ ಸಿದ್ಧ ಎಂದು ಪಟ್ಟುಹಿಡಿದಿದ್ದ ರೈತರಿಗೆ ದಿಲ್ಲಿಯ ಬುರಾರಿ ಮೈದಾನದಲ್ಲಿ ಪ್ರತಿಭಟನೆ ಮುಂದುವರಿಸಲು ಅವಕಾಶ ನೀಡುವುದಾಗಿ ಪೊಲೀಸರು ಶುಕ್ರವಾರ ಹೇಳಿದ್ದರು. ಆದರೆ ಇದನ್ನು ರೈತ ಸಂಘಟನೆ ತಿರಸ್ಕರಿಸಿದೆ. ಬೇರೆ ಯಾವ ಕಡೆಗೂ ಹೋಗದಿರಲು ಮತ್ತು ಇಲ್ಲೇ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಲಾಗಿದೆ. ಪ್ರತೀ ದಿನ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಿ ಆಯಾ ದಿನದ ಹೋರಾಟದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನ ಪ್ರಧಾನ ಕಾರ್ಯದರ್ಶಿ ಹರೀಂದರ್ ಸಿಂಗ್ ಹೇಳಿದ್ದಾರೆ.

ಈ ಮಧ್ಯೆ, ಪ್ರತಿಭಟನೆ ನಿಲ್ಲಿಸಿ ಮಾತುಕತೆಗೆ ಬರುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಶನಿವಾರ ರೈತರನ್ನು ಆಹ್ವಾನಿಸಿದ್ದಾರೆ. ‘ರೈತರ ಹೆಸರಿನಲ್ಲಿ ರಾಜಕೀಯ ನಡೆಸದಂತೆ ರಾಜಕೀಯ ಪಕ್ಷಗಳನ್ನು ಆಗ್ರಹಿಸುತ್ತೇನೆ. ಸಮಸ್ಯೆಯ ಪರಿಹಾರಕ್ಕೆ ಡಿಸೆಂಬರ್ 3ರಂದು ಮಾತುಕತೆಗೆ ಬರುವಂತೆ ರೈತರನ್ನು ಆಹ್ವಾನಿಸಿದ್ದೇವೆ. ರೈತರು ಮಾತುಕತೆಗೆ ಬರುವ ವಿಶ್ವಾಸವಿದೆ’ ಎಂದು ಸಚಿವರು ಹೇಳಿದ್ದಾರೆ.

ಪ್ರತಿಭಟನಾ ಸ್ಥಳದಲ್ಲೇ ಆಹಾರ ಸಿದ್ಧ

ಕೇಂದ್ರದ ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ರೈತರು, ದೀರ್ಘಾವಧಿ ಪ್ರತಿಭಟನೆಗೆ ಸನ್ನದ್ಧರಾಗಿಯೇ ಬಂದಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲೇ ಆಹಾರ ಬೇಯಿಸಲು ಅಗತ್ಯವಿರುವ ಸ್ಟೌ, ಪಾತ್ರೆಗಳನ್ನು ತಂದಿದ್ದು ಅಲ್ಲೇ ಆಹಾರ ಸಿದ್ಧಪಡಿಸುತ್ತಿದ್ದಾರೆ. ತಮ್ಮ ವಾಹನದಲ್ಲೇ ಮೊಬೈಲ್‌ನ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. 50 ಜನರ ತಂಡವಾಗಿ ದಿಲ್ಲಿಯನ್ನು ಪ್ರವೇಶಿಸಬಹುದು ಎಂದು ಶುಕ್ರವಾರ ಪೊಲೀಸರು ಹೇಳಿದ್ದರು. ಆದರೆ ಇದುವರೆಗೆ ಒಗ್ಗೂಡಿಯೇ ಮುಂದುವರಿದಿರುವ ನಮ್ಮನ್ನು ಬೇರ್ಪಡಿಸುವ ಸಂಚು ಇದಾಗಿದೆ. ಇದಕ್ಕೆ ನಾವು ಒಪ್ಪುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

ಹಾಡು, ಘೋಷಣೆಗೆ ಡೋಲಿನ ಹಿಮ್ಮೇಳ

 ಈ ಮಧ್ಯೆ, ಪಂಜಾಬ್, ಹರ್ಯಾನ, ಮಧ್ಯಪ್ರದೇಶ ಮತ್ತು ರಾಜಸ್ತಾನದಿಂದ ಟ್ರಾಕ್ಟರ್ ಮತ್ತು ಟ್ರಕ್‌ಗಳಲ್ಲಿ ಆಗಮಿಸಿದ ಕೆಲವು ರೈತರು ಹಾಡು, ಘೋಷಣೆ, ಡೋಲು ವಾದನದೊಂದಿಗೆ ನಿರಂಕಾರಿ ಮೈದಾನದಲ್ಲಿ ಬಂದು ಸೇರಿದ್ದಾರೆ. ಧರ್ತಿ ಮಾತಾ ಕಿ ಜೈ, ನರೇಂದ್ರ ಮೋದಿ ಕಿಸಾನ್ ವಿರೋಧಿ, ಇಂಕ್ವಿಲಾಬ್ ಝಿಂದಾಬಾದ್ ಮತ್ತಿತರ ಘೋಷಣೆ ಮೈದಾನದಲ್ಲಿ ಅನುರಣಿಸಿತು. ಡೋಲಿನ ವಾದನ ಮತ್ತು ‘ಹಮ್ ಹೋಂಗೆ ಕಾಮ್‌ಯಾಬ್’ ಎಂಬ ಹಾಡಿಗೆ ಕೆಲವು ರೈತರು ಹೆಜ್ಜೆಹಾಕಿದರು. ‘ಚಾಹೆ ಕುಚ್ ಭೀ ಕರ್ಲೋ ಹಮ್ ಬಡ್ತೆ ಜಾಯೇಂಗೆ’ ಎಂಬ ಹಾಡಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಸದಸ್ಯರು ನರ್ತಿಸಿದರು.

ಲಂಗರ್, ಆಹಾರದ ವ್ಯವಸ್ಥೆ

ನಿರಂಕಾರಿ ಮೈದಾನದಲ್ಲಿ ಬಂದು ಸೇರಿದ್ದ ರೈತರಿಗೆ ಬಾಂಗ್ಲಾ ಸಾಹಿಬ್ ಗುರುದ್ವಾರದ ವತಿಯಿಂದ ಲಂಗರ್ ವ್ಯವಸ್ಥೆ ಮಾಡಲಾಗಿತ್ತು. ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರವೂ ರೈತರಿಗೆ ಊಟದ ವ್ಯವಸ್ಥೆ ಮಾಡಿತ್ತು. ಇ-ರಿಕ್ಷಾ(ವಿದ್ಯುತ್‌ಚಾಲಿತ ರಿಕ್ಷಾ)ದ ಮೂಲಕ ಓರ್ವ ವ್ಯಕ್ತಿ ಪ್ರತಿಭಟನಾ ಸ್ಥಳದಲ್ಲಿ ಕೊರೋನ ಸಾಂಕ್ರಾಮಿಕ ರೋಗದ ಬಗ್ಗೆ ಮತ್ತು ಮಾಸ್ಕ್ ಧರಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ.

ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಉಪಸ್ಥಿತಿಯ ಮಾಹಿತಿ: ಖಟ್ಟರ್ ಕೇಂದ್ರ ಸರಕಾರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ನುಸುಳಿರುವ ಬಗ್ಗೆ ತಮ್ಮ ಸರಕಾರಕ್ಕೆ ಮಾಹಿತಿ ದೊರಕಿದೆ ಎಂದು ಹರ್ಯಾನ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೇಳಿದ್ದಾರೆ. ಪ್ರತಿಭಟನಾ ನಿರತ ಗುಂಪಿನಲ್ಲಿ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ನುಸುಳಿರುವ ಮಾಹಿತಿಯಿದೆ. ಈ ಬಗ್ಗೆ ಸ್ಪಷ್ಟ ಪುರಾವೆ ದೊರೆತೊಡನೆ ವಿವರ ನೀಡುತ್ತೇವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News