ಗಣಪತಿ ಫೋಟೋದಲ್ಲಿ ಡ್ರಗ್ಸ್ ಸಾಗಾಟ !

Update: 2020-11-29 11:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 29: ಗಣಪತಿ ಫೋಟೋ ಸ್ಟ್ಯಾಂಪ್‍ಗಳಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಕೇರಳ ಮೂಲದ ಅರುಣ್ ಆಂಥೋನಿ ಹಾಗೂ ಗಣೇಶ್ ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಅಮಲ್ ಬೈಜು ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರುಣ್ ಎಂಬಾತ ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿ ಎಕ್ಸ್ ರೇ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಸಿಕ್ಕಿದ್ದು, ಈತ  ಕೊಟ್ಟಾಯಂನಿಂದ ಕೋರಿಯರ್ ಮೂಲಕ ಸ್ಟ್ಯಾಂಪ್‍ಗಳಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ. ಜತೆಗೆ ಯಾರಿಗೂ ತಿಳಿಯದಂತೆ ಮಾದಕ ವಸ್ತುಗಳ ಮೇಲೆ ಸ್ಟ್ಯಾಂಪ್ ಮೇಲೆ ಗಣಪತಿ ಫೋಟೊ ಹಾಕಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋರಿಯರ್ ಮತ್ತು ಅಂಚೆಗಳ ಮೇಲೆ ಕಣ್ಣಿಟ್ಟಿದ್ದ ಕಸ್ಟಮ್ಸ್ ಅಧಿಕಾರಿಗಳು ಸಿಸಿಬಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ಒಂದು ಸ್ಟ್ಯಾಂಪ್ 4 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಒಟ್ಟು 400 ಕ್ಕೂ ಹೆಚ್ಚು ಸ್ಟ್ಯಾಂಪ್ ಬಂದಿದ್ದು, ಒಟ್ಟಾರೆ 15 ಲಕ್ಷ ರೂ. ಮಾಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News