ಏನಿದು ಸಾರ್ಕೋಮಾ? ಲಕ್ಷಣಗಳು ಮತ್ತು ಕಾರಣಗಳು

Update: 2020-11-29 15:09 GMT

ಸಾರ್ಕೋಮಾ ಮೂಲತಃ ಒಂದು ವಿಧದ ಕ್ಯಾನ್ಸರ್ ಆಗಿದ್ದು, ಸಂಯೋಜಕ ಅಂಗಾಂಶದ ರೂಪಾಂತರಗೊಂಡ ಕೋಶಗಳಿಂದ ಉಂಟಾಗುತ್ತದೆ. ಈ ಅಂಗಾಂಶಗಳಲ್ಲಿ ಮೂಳೆ, ಮೃದ್ವಸ್ಥಿ, ಕೊಬ್ಬು, ನಾಳೀಯ ಅಥವಾ ಹೆಮಟೊಪೊಯೆಟಿಕ್ ಅಂಗಾಂಶಗಳು ಒಳಗೊಂಡಿವೆ. ಇಂತಹ ಯಾವುದೇ ಅಂಗಾಂಶದಲ್ಲಿ ಸಾರ್ಕೋಮಾ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ವಿಭಿನ್ನ ಮತ್ತು ಅಪರೂಪದ ಕ್ಯಾನ್ಸರ್ ಆಗಿದೆ. ಸಾರ್ಕೋಮಾದ 50ಕ್ಕೂ ಅಧಿಕ ವಿಧಗಳಿವೆಯಾದರೂ ಅವುಗಳನ್ನು ಮೂಳೆ ಸಾರ್ಕೋಮಾ ಮತ್ತು ಮೃದು ಅಂಗಾಂಶ ಸಾರ್ಕೋಮಾ,ಹೀಗೆ ಎರಡು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಲಾಗಿದೆ.

ಬಯಾಪ್ಸಿಯ ಆಧಾರದಲ್ಲಿ ರೋಗಿಯು ಗುರಿಯಾಗಿರುವ ಸಾರ್ಕೋಮಾ ಯಾವ ಗುಂಪಿಗೆ ಸೇರಿದ್ದು ಮತ್ತು ಆ ಗುಂಪಿನಡಿ ಯಾವ ವಿಧದ್ದಾಗಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ. ಮೂಳೆ ಅಂಗಾಂಶದ ಗುಂಪಿನಲ್ಲಿ ಒಸ್ಟೊಸಾರ್ಕೋಮಾ,ಎವಿಂಗ್ ಸಾರ್ಕೋಮಾ ಮತ್ತು ಕೊಂಡ್ರೊಸಾರ್ಕೋಮಾ ಇವು ಸಾಮಾನ್ಯ ವಿಧಗಳಾಗಿವೆ. ಮೃದು ಅಂಗಾಂಶ ಸಾರ್ಕೋಮಾದಲ್ಲಿ 50ಕ್ಕೂ ಅಧಿಕ ಉಪ ವಿಧಗಳಿದ್ದು,ಈ ಪಟ್ಟಿ ಪ್ರತಿವರ್ಷ ಬೆಳೆಯುತ್ತಲೇ ಇರುತ್ತದೆ.

ಸಾರ್ಕೋಮಾದ ಲಕ್ಷಣಗಳು

ಸಾರ್ಕೋಮಾದ ಲಕ್ಷಣಗಳು ಅದರ ವಿಧವನ್ನು ಅವಲಂಬಿಸಿರುತ್ತವೆ. ಕೆಲವೊಮ್ಮೆ ಸಾರ್ಕೋಮಾವನ್ನು ಸೂಚಿಸುವ ಅಂಗಾಂಶವನ್ನು ಗುರುತಿಸುವುದು ಸುಲಭವಾಗುತ್ತದೆ,ಆದರೆ ಕೆಲವು ರೋಗಿಗಳಲ್ಲಿ ಲಕ್ಷಣಗಳ ಅಜ್ಞಾನದಿಂದಾಗಿ ರೋಗವು ನಂತರದ ಹಂತಗಳಲ್ಲಿ ಪತ್ತೆಯಾಗುತ್ತದೆ.

ಮೂಳೆಯ ಊತ,ನೋವು,ಕೆಲವೊಮ್ಮೆ ಯಾವುದೇ ಗಂಭೀರ ಏಟಾಗಿರದಿದ್ದರೂ ಮೂಳೆ ಮುರಿತ ಇವು ಮೂಳೆ ಸಾರ್ಕೋಮಾದ ಲಕ್ಷಣಗಳಲ್ಲಿ ಸೇರಿವೆ.

ಊತ ಮೃದು ಅಂಗಾಂಶ ಸಾರ್ಕೋಮಾದ ಮುಖ್ಯ ಲಕ್ಷಣವಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಈ ಊತ ನೋವುರಹಿತವಾಗಿರುತ್ತದೆ ಮತ್ತು ತನಗೆ ಗಂಭೀರ ಸಮಸ್ಯೆಯಿದೆ ಎನ್ನುವುದು ರೋಗಿಯ ಅರಿವಿಗೆ ಬರುವುದಿಲ್ಲ. ಈ ವಿಧದ ಸಾರ್ಕೋಮಾ ಉಂಟಾಗುವುದು ಅಪರೂಪ. ಸಾಮಾನ್ಯವಾಗಿ ಊತವು ಕಾಲುಗಳು ಅಥವಾ ತೋಳುಗಳಲ್ಲಿ ಪರಿಣಾಮವನ್ನುಂಟು ಮಾಡುತ್ತದೆ. ಊತವು ಐದು ಸೆಂ.ಮೀ.ಗಿಂತ ದೊಡ್ಡದಾಗಿದ್ದರೆ ಅಥವಾ ಕ್ರಮೇಣ ಹೆಚ್ಚುತ್ತಿದ್ದರೆ ಅದನ್ನು ಕಡೆಗಣಿಸಬಾರದು ಮತ್ತು ತಕ್ಷಣ ತಜ್ಞವೈದ್ಯರಿಗೆ ತೋರಿಸಬೇಕು.

ಸಾರ್ಕೋಮಾಕ್ಕೆ ಕಾರಣಗಳು

ಹೆಚ್ಚಿನ ಸಾರ್ಕೋಮಾಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಯಾದ್ರಚ್ಛಿಕವಾಗಿ ಉಂಟಾಗುತ್ತವೆ,ಆದರೆ ಅವು ಗಂಭೀರ ಸ್ವರೂಪದ್ದಾಗಿರಬಹುದು. ಇವು ಯಾರನ್ನೂ ಬಾಧಿಸುತ್ತವೆ. ಆದರೆ ವಿಕಿರಣ ಚಿಕಿತ್ಸೆಯ ಬಳಿಕ ಆಥವಾ ಕೆಲವು ಜನ್ಮದತ್ತ ಸ್ಥಿತಿಗಳಿಂದ ಸಾರ್ಕೋಮಾ ಉಂಟಾಗುವ ಅಪರೂಪದ ನಿದರ್ಶನಗಳಿವೆ.

ಸಾರ್ಕೋಮಾಕ್ಕೆ ಚಿಕಿತ್ಸೆ

 ಶಸ್ತ್ರಚಿಕಿತ್ಸೆಯು ಸಾರ್ಕೋಮಾಕ್ಕೆ ಮುಖ್ಯ ಚಿಕಿತ್ಸೆಯಾಗಿದೆ. ಸಾರ್ಕೋಮಾ ತಜ್ಞರು ಮೊದಲು ಶಸ್ತ್ರಚಿಕತ್ಸೆ ಮತ್ತು ಅದಕ್ಕೂ ಮುನ್ನ ಬಯಾಪ್ಸಿಯನ್ನು ನಡೆಸಬಹುದು. ಜನರಲ್ ಸರ್ಜನ್‌ಗಳಿಗಿಂತ ವಿಶೇಷಜ್ಞರು ಇದರಲ್ಲಿ ಹೆಚ್ಚು ಪಳಗಿರುತ್ತಾರೆ. ಸಾರ್ಕೋಮಾ ಶಸ್ತ್ರಚಿಕಿತ್ಸೆಗಳು ಅತ್ಯಂತ ವಿಶೇಷ ಶಸ್ತ್ರಚಿಕಿತ್ಸೆಗಳಾಗಿವೆ. ಸೂಕ್ತ ರೀತಿಯಲ್ಲಿ ಮೊದಲ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಅದು ರೋಗಿಯ ಕಾಲು ಅಥವಾ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಅಂದರೆ ಶಸ್ತ್ರಚಿಕಿತ್ಸೆಯನ್ನು ಸಮರ್ಪಕವಾಗಿ ನಡೆಸದಿದ್ದರೆ ಕಾಲನ್ನು ಕತ್ತರಿಸಬೇಕಾಗಬಹುದು ಅಥವಾ ರೋಗಿಯ ಜೀವಕ್ಕೆ ಅಪಾಯವುಂಟಾಗಬಹುದು.

ಜೀವನಶೈಲಿಯಲ್ಲಿ ಬದಲಾವಣೆಗಳು ಅಗತ್ಯವೇ?

ಎಲ್ಲ ವಿಧಗಳ ಕ್ಯಾನ್ಸರ್‌ಗಳ ಪೈಕಿ ಸಾರ್ಕೋಮಾದ ಪಾಲು ಕೇವಲ ಶೇ.1ರಷ್ಟಿದೆ ಮತ್ತು ಅದು ತುಂಬಾ ಅಪರೂಪವಾಗಿ ಉಂಟಾಗುತ್ತದೆ. ಇದೇ ಕಾರಣದಿಂದ ಹೆಚ್ಚಿನ ಜನರು ಸಾರ್ಕೋಮಾದ ಹೆಸರನ್ನೇ ಕೇಳಿರುವುದಿಲ್ಲ ಮತ್ತು ಸಾಮಾನ್ಯ ಕ್ಯಾನ್ಸರ್‌ಗಳು ಎಲ್ಲ ಗಮನವನ್ನು ಪಡೆದುಕೊಂಡಿರುವುದರಿಂದ ಇಂತಹುದೊಂದು ಮೂಳೆ ಕ್ಯಾನ್ಸರ್ ಉಂಟಾಗುತ್ತದೆ ಎನ್ನುವುದೂ ಅವರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಸಾರ್ಕೋಮಾದಂತಹ ಅಪರೂಪದ ಕ್ಯಾನ್ಸರ್‌ಗಳು ಕಡೆಗಣಿಸಲ್ಪಡುವುದೇ ಹೆಚ್ಚು.

ಸಾರ್ಕೋಮಾಕ್ಕೆ ನಿಖರವಾಗಿ ಬೆಟ್ಟು ಮಾಡಬಹುದಾದ ಕಾರಣಗಳಿಲ್ಲ, ಹೀಗಾಗಿ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳ ಬಗ್ಗೆ ಸಲಹೆ ನೀಡಲು ಏನೂ ಇಲ್ಲ ಎನ್ನುತ್ತಾರೆ ತಜ್ಞರು. ಸಾರ್ಕೋಮಾವನ್ನು ತಡೆಯುವುದಕ್ಕಿಂತ ಅದನ್ನು ಬೇಗನೆ ಪತ್ತೆ ಹಚ್ಚುವುದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸ ಎನ್ನುತ್ತಾರೆ ವೈದ್ಯರು. ತೋಳುಗಳಲ್ಲಿ ಮತ್ತು ಕಾಲುಗಳಲ್ಲಿ ಯಾವುದೇ ಊತವು ಅಪಾಯಕಾರಿಯಾಗಬಹುದು ಮತ್ತು ತಕ್ಷಣ ಗಮನ ಹರಿಸಬೇಕಾಗುತ್ತದೆ ಎಂಬ ಅರಿವು ಸಾರ್ವಜನಿಕರಲ್ಲಿ ಇದ್ದರೆ ರೋಗ ಪತ್ತೆಯು ಸುಲಭವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News