ಕಾಲರ್‌ಬೋನ್ ನೋವಿಗೆ ಕಾರಣಗಳು ಮತ್ತು ಅದಕ್ಕೆ ಚಿಕಿತ್ಸೆ

Update: 2020-11-29 15:10 GMT

ಕ್ಲಾವಿಕಲ್ ಬೋನ್ ಅಥವಾ ಕಾಲರ್‌ಬೋನ್ ಅನ್ನು ನಾವು ಕೊರಳೆಲುಬು ಎಂದು ಕರೆಯಬಹುದು. ಕೊರಳೆಲುಬು ಕುತ್ತಿಗೆಯ ಕೆಳಭಾಗದಲ್ಲಿರುವ ಎಸ್ ಆಕಾರದ ವಿಶಿಷ್ಟ ಮೂಳೆಯಾಗಿದೆ. ಅದರ ಒಂದು ತುದಿಯು ಎದೆಮೂಳೆಯನ್ನು ಮತ್ತು ಇನ್ನೊಂದು ತುದಿಯು ಭುಜಗಳನ್ನು ಸಂಪರ್ಕಿಸುತ್ತದೆ. ನಾವು ಶರ್ಟ್ ಧರಿಸಿದಾಗ ಅದರ ಕಾಲರ್ ಈ ಮೂಳೆಯ ಸುತ್ತ ಆವರಿಸಿಕೊಳ್ಳುತ್ತದೆ ಮತ್ತು ಇದೇ ಕಾರಣದಿಂದ ಇದನ್ನು ಕಾಲರ್‌ಬೋನ್ ಎಂದು ಕರೆಯಲಾಗುತ್ತದೆ. ಎರಡು ಮೂಳೆಗಳು ಕಾಲರ್‌ಬೋನ್‌ನಲ್ಲಿ ಸೇರಿವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಮೂಳೆಗಳಲ್ಲಿ ಸ್ವಲ್ಪ ಅಹಿತ ಅಥವಾ ನೋವು ನಮಗೆ ಭಾಸವಾಗಬಹುದು,ಆದರೆ ಸಾಮಾನ್ಯವಾಗಿ ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಕಾಲರ್‌ಬೋನ್ ನೋವು ಯಾವ ಪರಿಣಾಮವನ್ನುಂಟು ಮಾಡಬಲ್ಲದು ಎನ್ನುವುದು ನಿಮಗೆ ಗೊತ್ತೇ? ಸಮಸ್ಯೆಯು ತೀವ್ರವಾಗಿದ್ದರೆ ಮಾತನಾಡುವುದು, ಮಲಗುವುದು,ತಿರುಗುವುದು ಮತ್ತು ಸುಮ್ಮನೆ ಬಿದ್ದುಕೊಳ್ಳುವುದೂ ಸವಾಲಿನ ಕೆಲಸವಾಗಬಹುದು. ಕೆಲವು ಪ್ರಕರಣಗಳಲ್ಲಿ ಮನೆಮದ್ದುಗಳ ನೆರವಿನಿಂದ ಈ ನೋವನ್ನು ಅಲ್ಪಾವಧಿಯಲ್ಲಿ ಗುಣಪಡಿಸಬಹುದು,ಆದರೆ ಕೆಲವು ಸಂದರ್ಭಗಳಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

ಒಸ್ಟಿಯೊಆರ್ಥ್ರಿಟಿಸ್ ಕ್ಲಾವಿಕಲ್ ಪೇಯ್ನಾ

 ಶರೀರದಲ್ಲಿಯ ಎರಡು ಮೂಳೆಗಳು ಪರಸ್ಪರ ಸಂಧಿಸುವಾಗ ಅವು ಪರಸ್ಪರ ಉಜ್ಜಿಕೊಳ್ಳುವುದನ್ನು ತಡೆಯಲು ರಕ್ಷಣಾ ಅಂಗಾಂಶವಿರುತ್ತದೆ. ಒಸ್ಟಿಯೊಆರ್ಥ್ರಿಟಿಸ್ ಅಥವಾ ಅಸ್ಥಿ ಸಂಧಿವಾತವು ಸಂದುಗಳ ಈ ರಕ್ಷಣಾ ಅಂಗಾಂಶಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಮೂಳೆಗಳಲ್ಲಿ ತೀವ್ರ ನೋವಿಗೆ ಕಾರಣವಾಗುತ್ತದೆ. ಅಂದ ಹಾಗೆ ಈ ನೋವು ಕಾಲರ್‌ಬೋನ್ ಸೇರಿದಂತೆ ಶರೀರದ ಯಾವುದೇ ಸಂದುವಿನಲ್ಲಿಯೂ ಕಾಣಿಸಿಕೊಳ್ಳಬಹುದು. ಕಾಲರ್‌ಬೋನ್ ನೋವು ಹಲವಾರು ದಿನಗಳಿಂದ ಕಾಡುತ್ತಿದ್ದರೆ ಮತ್ತು ಗುಣವಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಅಸಮರ್ಪಕ ಭಂಗಿ

 ನಮ್ಮ ಶರೀರದ ಅಸಮರ್ಪಕ ಭಂಗಿಯೂ ಕಾಲರ್‌ಬೋನ್ ನೋವಿಗೆ ಕಾರಣವಾಗುತ್ತದೆ. ಬೆಳಿಗ್ಗೆ ಎಚ್ಚರಗೊಂಡ ಬಳಿಕ ನಿರ್ದಿಷ್ಟ ಭಂಗಿಯಲ್ಲಿ ದೀರ್ಘಕಾಲ ಮಲಗಿರುವುದು,ಪ್ರಯಾಣಿಸುವಾಗ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ಇವು ಇಂತಹ ಕೆಲವು ನಿದರ್ಶನಗಳಾಗಿವೆ. ಹೆಚ್ಚಿನ ಪ್ರಕರಣಗಳಲ್ಲಿ ಈ ಸಮಸ್ಯೆ ಹಿಗ್ಗಿಸುವಿಕೆ ಅಥವಾ ನೋವು ನಿವಾರಕ ಬಾಮ್ ಅನ್ನು ಹಚ್ಚಿದರೆ ಕೆಲವೇ ಗಂಟೆಗಳಲ್ಲಿ ಮಾಯವಾಗುತ್ತದೆ. ಹೀಗಾಗಿ ಇಂತಹ ನೋವಿಗೆ ಕಳಪೆ ಭಂಗಿ ಚಿಂತೆ ಪಡಬೇಕಾದ ವಿಷಯವೇನಲ್ಲ. ಆದರೆ ನೋವು ಉಳಿದುಕೊಂಡಿದ್ದರೆ ವೈದ್ಯರ ಸಲಹೆಯ ಮೇರೆಗೆ ನೋವು ನಿವಾರಕ ಔಷಧಿಗಳನ್ನು ಸೇವಿಸಬಹುದು.

ಥೋರಾಸಿಕ್ ಔಟ್‌ಲೆಟ್ ಸಿಂಡ್ರೋಮ್

ಹೆಚ್ಚಿನ ಸಂದರ್ಭಗಳಲ್ಲಿ ಕಾಲರ್‌ಬೋನ್ ರಕ್ತನಾಳಗಳ ಸುತ್ತ ಅನಗತ್ಯ ಒತ್ತಡವನ್ನುಂಟು ಮಾಡುತ್ತದೆ ಮತ್ತು ಇದು ನೋವಿಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಥೋರಾಸಿಕ್ ಔಟ್‌ಲೆಟ್ ಸಿಂಡ್ರೋಮ್ (ಟಿಒಎಸ್) ಎಂದು ಕರೆಯಲಾಗುತ್ತದೆ. ಬೊಜ್ಜು, ತೀವ್ರ ವ್ಯಾಯಾಮ,ಭಾರವಾದ ವಸ್ತುವನ್ನು ದಿಢೀರ್ ಎತ್ತುವುದು ಅಥವಾ ಯಾವುದೇ ಏಟಿನಂತಹ ವಿವಿಧ ಕಾರಣಗಳಿಂದ ಟಿಒಎಸ್ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರು ಅಲ್ಟ್ರಾಸೌಂಡ್ ಅಥವಾ ಎಕ್ಸ್‌ರೇ ಪರೀಕ್ಷೆಯ ಬಳಿಕವಷ್ಟೇ ರೋಗಿಗೆ ಸೂಕ್ತ ಸಲಹೆಯನ್ನು ನೀಡಬಲ್ಲರು.

ಸಂದುಗಳಿಗೆ ಪೆಟ್ಟು ಅಥವಾ ಗಾಯ

ಪ್ರತಿಯೊಂದೂ ಸಂದು ನೋವು ಅಸ್ಥಿ ಸಂಧಿವಾತವಲ್ಲ ಎನ್ನುವುದು ನಿಮಗೆ ತಿಳಿದಿರಲಿ. ಹೆಚ್ಚಿನ ಸಂದರ್ಭಗಳಲ್ಲಿ ಅಲ್ಪ ಪೆಟ್ಟು ಸಹ ಸಂದುಗಳಿಗೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ ಮತ್ತು ಇದರಿಂದ ನೋವು ಕಾಣಿಸಿಕೊಳ್ಳುತ್ತದೆ. ಕಾಲರ್‌ಬೋನ್ ಸುತ್ತ ಏಟು ಬಿದ್ದರೆ ಅಥವಾ ಭುಜ ಅಡಿಯಾಗಿ ಕೆಳಗೆ ಬಿದ್ದರೆ ಇಂತಹ ನೋವು ಉಂಟಾಗಬಹುದು. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ನೋವು ನಿವಾರಕ ಬಾಮ್ ಲೇಪಿಸುವುದರಿಂದ, ಬಿಸಿನೀರಿನ ಶಾಖ ಕೊಡುವುದರಿಂದ ,ನೋವು ನಿವಾರಕ ಮಾತ್ರೆಗಳ ಸೇವನೆಯಿಂದ ಗುಣವಾಗುತ್ತದೆ. ಆದರೆ ಇಷ್ಟೆಲ್ಲ ಮಾಡಿಯೂ ಸಮಸ್ಯೆ ಉಳಿದುಕೊಂಡಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News