ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಪರ ಕಾಂಗ್ರೆಸ್ ನಿಲ್ಲುತ್ತದೆ: ಡಿ.ಕೆ.ಶಿವಕುಮಾರ್

Update: 2020-11-30 16:53 GMT

ಬೆಂಗಳೂರು, ನ. 30: 'ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ನಾಯಕರು ಸೇರಿದಂತೆ 9 ತಂಡಗಳನ್ನು ರಚನೆ ಮಾಡುತ್ತಿದ್ದು, ಅವರು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಪ್ರವಾಸ ಮಾಡಲಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ಬೆಂಗಳೂರು ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ ಏರ್ಪಡಿಸಿದ್ದ ಪಕ್ಷದ ಮುಖಂಡರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೆ ರಾಜ್ಯದಲ್ಲಿ ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳುವ ಮುಖಂಡರ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ ಸರಕಾರದ ತಪ್ಪುಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಸಿ, ಜನರ ಕೈಗೇ ಅಧಿಕಾರ ನೀಡಲು ನಮ್ಮದೇ ಆದ ಪ್ರಯತ್ನ ಮಾಡುತ್ತೇವೆ ಎಂದ ಶಿವಕುಮಾರ್, ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆ ಮಾಡಿರುವ ರಾಜ್ಯ ಚುನಾವಣಾ ಆಯೋಗ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಪ್ರಚಲಿತ ವಿದ್ಯಮಾನಗಳ ಚರ್ಚೆ: ಕಾಂಗ್ರೆಸ್ ಪಕ್ಷದ 40ಕ್ಕೂ ಅಧಿಕ ಮಂದಿ ಹಿರಿಯ ನಾಯಕರ ಜತೆ ರಾಜ್ಯದ ಪ್ರಚಲಿತ ವಿದ್ಯಮಾನಗಳು, ಪಕ್ಷದ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನೂ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇನ್ನಷ್ಟೇ ತೀರ್ಮಾನಕ್ಕೆ ಬರಬೇಕಿದೆ ಎಂದು ಹೇಳಿದರು.

ಇತ್ತೀಚೆಗೆ ನಮ್ಮನ್ನು ಅಗಲಿದ ಪಕ್ಷದ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಹಾಗೂ ತರುಣ್ ಗೊಗೋಯ್ ಅವರಿಗೆ ಸಂತಾಪ ಸೂಚಿಸಿದೆವು ಎಂದು ಶಿವಕುಮಾರ್ ಇದೇ ವೇಳೆ ತಿಳಿಸಿದರು.

ಪಕ್ಷ ಸಂಘಟನೆ: ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ಮಾಡಲು, ಗ್ರಾಮ ಪಂಚಾಯತ್ ಹಾಗೂ ಬೂತ್ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು. ಅದಕ್ಕೆ ‘ಪ್ರಜಾ ಪ್ರತಿನಿಧಿ’ ಎಂದು ಹೆಸರಿಟ್ಟಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಲಾಗುವುದು ಎಂದರು.

ಆತ್ಮಾವಲೋಕನ: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಎಚ್ಚೆತ್ತುಕೊಂಡು ಸ್ಥಳೀಯ ನಾಯಕರಿಗೆ ಆದ್ಯತೆ ನೀಡಲಿದ್ದೇವೆ. ಬೀದರ್ ಜಿಲ್ಲೆಯ ಬಸವಕಲ್ಯಾಣ, ರಾಯಚೂರು ಜಿಲ್ಲೆಯ ಮಸ್ಕಿ, ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚಿಸಿದ್ದು, ಅವರ ಸಲಹೆ ಮೇರೆಗೆ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್‍ಗೆ ಹೆಸರು ಶಿಫಾರಸ್ಸು ಮಾಡುತ್ತೇವೆ.

ಪಕ್ಷದ ಸಂಘಟನೆಗಾಗಿ ಸಾಂಸ್ಕೃತಿಕ, ಚಾಲಕರ ಹಾಗೂ ಸಹಕಾರ ಸಂಘ ಘಟಕಗಳನ್ನು ರಚನೆ ಮಾಡಲಿದ್ದು, ಗ್ರಾಮ ಪಂಚಾಯತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಈ ಘಟಕಗಳು ಆರಂಭವಾಗಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಜನಪರ ಹೋರಾಟದ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ. ರೈತರನ್ನು ಉಳಿಸಲು ನಮ್ಮ ಹೋರಾಟ ಮಾಡುತ್ತೇವೆ. ಕೂಡಲೇ ಕೇಂದ್ರ ಸರಕಾರ ರೈತರ ಸಮಸ್ಯೆ ಬಗೆಹರಿಸಿ, ಎಲ್ಲ ರೈತರಿಗೆ ಮಾರಕವಾಗಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹ ಮಾಡುತ್ತೇವೆ ಎಂದು ಅವರುತಿಳಿಸಿದರು.

ದೊಡ್ಡವರು: ಮಾಜಿ ಸಿಎಂ ಕುಮಾರಸ್ವಾಮಿ ದೊಡ್ಡವರು, ಅವರು ಏನು ಬೇಕಾದರೂ ಹೇಳಲಿ. ಅವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದ ಶಿವಕುಮಾರ್, ಪರಿಷತ್ ಸದಸ್ಯ ವಿಶ್ವನಾಥ್ ಅವರು ಸಚಿವರಾಗಬಾರದು ಎಂಬುದು ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಹೇಳಿದರು.

ಹಿಂದುತ್ವ ಯಾರ ಆಸ್ತಿಯೂ ಅಲ್ಲ. ಭಾರತದ ಪರಂಪರೆ, ಸಂಸ್ಕೃತಿ ನಮ್ಮ ಆಸ್ತಿ. ಮಹಾತ್ಮ ಗಾಂಧೀಜಿ, ವಿವೇಕಾನಂದರ ಹಿಂದುತ್ವ ವಾದದ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಈ ಬಗ್ಗೆ ಮುಂದೆ ಮಾತನಾಡುತ್ತೇನೆ. ಸಂವಿಧಾನ ಉಳಿಸೋದು ನಮ್ಮ ಗುರಿ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News