ಮಾಲಕರ ಸೋಗಿನಲ್ಲಿ ನಕಲಿ ಮನೆ ನೀಡಿ ಲಕ್ಷಾಂತರ ರೂ. ವಂಚನೆ: ಇಬ್ಬರು ವಶಕ್ಕೆ

Update: 2020-11-30 17:58 GMT

ಬೆಂಗಳೂರು, ನ.30: ಮನೆ ಬಾಡಿಗೆ ಪಡೆದು ಮಾಲಕರ ಸೋಗಿನಲ್ಲಿ ಮನೆಗಳನ್ನು ಸಾರ್ವಜನಿಕರಿಗೆ ಭೋಗ್ಯಕ್ಕೆ ನೀಡಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪದಡಿ ಇಬ್ಬರನ್ನು ಬಾಣಸವಾಡಿ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೋಹರ್ ನಾನಾವತ್, ಶೀತಲ್ ನಾನಾವತ್ ಎಂಬುವರು ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

2018ರಲ್ಲಿ ಕಿರಣ್‍ ಕುಮಾರ್ ಎಂಬುವರು ಭೋಗ್ಯಕ್ಕಾಗಿ ಮನೆ ಹುಡುಕುತ್ತಿದ್ದಾಗ ಆರೋಪಿಗಳಿಬ್ಬರು ಒಎಲ್‍ಎಕ್ಸ್ ಜಾಲತಾಣದಲ್ಲಿ ಮನೆ ಭೋಗ್ಯಕ್ಕೆ ಖಾಲಿ ಇರುವ ಬಗ್ಗೆ ಜಾಹೀರಾತು ನೀಡಿದ್ದರು. ಇದನ್ನು ನೋಡಿ ಆರೋಪಿಗಳನ್ನು ಸಂಪರ್ಕಿಸಿದ ಕಿರಣ್ ಅವರಿಗೆ ಎಚ್‍ಬಿಆರ್ ಲೇಔಟ್‍ನಲ್ಲಿ ಫ್ಲ್ಯಾಟ್ ತೋರಿಸಿದ್ದಾರೆ ಎನ್ನಲಾಗಿದೆ.

ವಂಚನೆ ಅರಿಯದ ಕಿರಣ್ ಮಾತುಕತೆ ನಡೆಸಿ ಹಂತಹಂತವಾಗಿ 17 ಲಕ್ಷ ರೂ. ವಂಚಕರಿಗೆ ನೀಡಿ ಮನೆ ಕರಾರು ಪತ್ರ ಮಾಡಿಕೊಂಡು ಅಂದಿನಿಂದ ವಾಸವಾಗಿದ್ದರು. ಅನುಮಾನದ ಮೇರೆಗೆ ಇತ್ತೀಚೆಗೆ ಆರೋಪಿಗಳನ್ನು ಸಂಪರ್ಕಿಸಿದರೂ, ಸಿಕ್ಕಿಲ್ಲ. ಬಳಿಕ ವಂಚನೆಗೊಳಗಾಗಿರುವುದು ಬಯಲಾಗಿದೆ.

ಈ ಸಂಬಂಧ ದೂರು ನೀಡಿದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News