ಜೈ ಕಿಸಾನ್!

Update: 2020-12-01 06:14 GMT

 ಹಮ್ ಮೆಹನತ್ ಕಶ್ ಇಸ್ ದುನಿಯಾ ಸೆ ಜಬ್ ಅಪ್ನಾ ಹಿಸ್ಸಾ ಮಾಂಗೆಂಗೆ
ಏಕ್ ಬಾಗ್ ನಹೀ ಏಕ್ ಖೇತ್ ನಹಿ ಹಮ್ ಸಾರೀ ದುನಿಯಾ ಮಾಂಗೆಂಗೇ

ನಾವು ಶ್ರಮಿಕರು ಈ ಲೋಕದ ಮುಂದೆ ನಮ್ಮ ಪಾಲನ್ನು ಕೇಳಲು ನಿಂತ ದಿನ ಒಂದು ತೋಟ, ಒಂದು ಹೊಲವನ್ನಲ್ಲ, ನಾವು ಸಂಪೂರ್ಣ ಲೋಕವನ್ನೇ ಕೇಳಲಿರುವೆವು! (1980ರ ಮಝ್‌ದೂರ್ ಚಿತ್ರವೊಂದರ ಹಾಡಿನ ಸಾಲುಗಳು)

ಶರತ್ತು ಬದ್ಧ ಮಾತುಕತೆಯ ಪ್ರಸ್ತಾವವನ್ನು ರೈತರು ತಿರಸ್ಕರಿಸಿದ್ದಾರೆ. ನೂತನ ಕೃಷಿ ಕಾಯ್ದೆಯ ವಿರುದ್ಧ ರೈತರ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿಂದೆ ಹತ್ತು ಹಲವು ಪ್ರತಿಭಟನೆಗಳನ್ನು ದಮನಿಸಿದ ಅನುಭವವುಳ್ಳ ಸರಕಾರ, ಅದೇ ರೀತಿಯಲ್ಲಿ ರೈತರ ಧ್ವನಿಯನ್ನು ಅಡಗಿಸಬಹುದು ಎನ್ನುವ ಅದರ ಆತ್ಮವಿಶ್ವಾಸ ಕೈ ಕೊಟ್ಟಿದೆ. ದಿಲ್ಲಿಯನ್ನು ಆವರಿಸಿಕೊಂಡಿರುವ ರೈತರ ಜನಸಾಗರಕ್ಕೆ ತಬ್ಬಿಬ್ಬಾಗಿರುವ ಸರಕಾರ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಾ ತನ್ನನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ. ರೈತರ ಪ್ರತಿಭಟನೆಯನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಜೋಡಿಸಲು ಯತ್ನಿಸಿದ ಗೃಹ ಸಚಿವ ಅಮಿತ್ ಶಾ ಬೆವರೊರೆಸಿಕೊಂಡು ರೈತರ ಪ್ರತಿಭಟನೆಗಳು ರಾಜಕೀಯವಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಅಮಿತ್ ಶಾ ಅವರ ಈ ಹೇಳಿಕೆಯ ಬಳಿಕವೂ, ಪ್ರತಿಭಟಿಸುತ್ತಿರುವ ರೈತರನ್ನು ಉಗ್ರಗಾಮಿಗಳು, ವಿವಿಧ ಪಕ್ಷಗಳ ಏಜೆಂಟರು ಎಂಬಿತ್ಯಾದಿಯಾಗಿ ಕರೆದು ಹೋರಾಟದ ವಿಶ್ವಾಸಾರ್ಹತೆಯನ್ನು ಕುಂದಿಸುವ ವಿಫಲ ಪ್ರಯತ್ನವನ್ನು ಬಿಜೆಪಿಯ ನಾಯಕರು ಮಾಡುತ್ತಿದ್ದಾರೆ.

ಒಂದೆಡೆ ಕಾಂಗ್ರೆಸ್‌ನ ಕುಮ್ಮಕ್ಕಿನಿಂದ ರೈತರು ಪ್ರತಿಭಟಿಸುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ತಳಸ್ತರದಲ್ಲಿ ರೈತರನ್ನು, ಕಾರ್ಮಿಕರನ್ನು ಸಂಘಟಿಸುವಲ್ಲಿ ಕಾಂಗ್ರೆಸ್ ಇಷ್ಟರಮಟ್ಟಿಗೆ ಸಮರ್ಥವಾಗಿದ್ದರೆ, ಇಂದು ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ. ಆದುದರಿಂದ ರೈತ ಪ್ರತಿಭಟನೆಯ ಹೆಗ್ಗಳಿಕೆಯನ್ನು ಕಾಂಗ್ರೆಸ್‌ಗೆ ಒಪ್ಪಿಸುವುದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಲಾಭವಾಗಬಹುದೇ ಹೊರತು, ರೈತರ ಪ್ರತಿಭಟನೆಯನ್ನು ಆ ಮೂಲಕ ದಮನಿಸುವುದು ಸಾಧ್ಯವಿಲ್ಲ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ದೊಡ್ಡ ಸಂಖ್ಯೆಯಲ್ಲಿ ಗಡ್ಡ, ಪೇಟಧಾರಿಗಳಾಗಿರುವ ಸಿಖ್ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವುದರಿಂದ ನೆರೆದವರನ್ನೆಲ್ಲ ಖಾಲಿಸ್ತಾನ್ ಉಗ್ರಗಾಮಿಗಳು ಎಂಬಂತೆ ಬಿಜೆಪಿ ಬಿಂಬಿಸಲು ಹೊರಟಿರುವುದು. ಈಗಾಗಲೇ ಪರಿಸರದ ಪರವಾಗಿ ಹೋರಾಡುತ್ತಿರುವವರನ್ನು ಅಭಿವೃದ್ಧಿ ವಿರೋಧಿಗಳು ಎಂದು ಕರೆದು ಅವರ ಕೈ ಕಟ್ಟಿ ಹಾಕಿರುವ ಸರಕಾರ, ಮಾನವ ಹಕ್ಕುಗಳಿಗಾಗಿ, ದಲಿತರ ಪರವಾಗಿ ಹೋರಾಡಿದ ಹೋರಾಟಗಾರರನ್ನು ‘ಅರ್ಬನ್ ನಕ್ಸಲ್’ ಎಂದು ಕರೆದು ಜೈಲಿಗೆ ತಳ್ಳಿದೆ. ಇದೀಗ ಕೃಷಿಯನ್ನು ಸಂಪೂರ್ಣ ಕಾರ್ಪೊರೇಟೀಕರಣಗೊಳಿಸುವ ಸರಕಾರದ ಹುನ್ನಾರದ ವಿರುದ್ಧ ಬೀದಿಗಿಳಿದಿರುವ ರೈತರನ್ನು ‘ಖಾಲಿಸ್ತಾನ್ ಉಗ್ರವಾದಿಗಳು’ ಎಂದು ಕರೆಯಲು ಮುಂದಾಗಿದೆ. ಇದು ಸಿಖ್ ಸಮುದಾಯಕ್ಕೆ, ಪಂಜಾಬ್‌ಗೆ ಮಾಡಿದ ಅವಮಾನ ಮಾತ್ರವಲ್ಲ, ಈ ದೇಶವನ್ನು ಅನ್ನ ಹಾಕಿ ಪೊರೆಯುತ್ತಿರುವ ರೈತಾಪಿ ವರ್ಗಕ್ಕೆ ಮಾಡಿರುವ ಅವಮಾನವಾಗಿದೆ.

ಭಾರತ ಆಹಾರ ಸಂಕಷ್ಟದಲ್ಲಿದ್ದಾಗ ಇಡೀ ದೇಶಕ್ಕೆ ಅನ್ನ ಹಾಕಿ ಪೊರೆದ ತಾಯಿ ಪಂಜಾಬ್. ಮೊತ್ತ ಮೊದಲ ಹಸಿರು ಕ್ರಾಂತಿಯಲ್ಲಿ ಪಂಜಾಬ್‌ನ ಕೊಡುಗೆ ಅತಿ ದೊಡ್ಡದು. ಸ್ವಾತಂತ್ರಾನಂತರದಲ್ಲಿ ದೇಶವನ್ನು ಕಾಡಿದ ಆಹಾರ ಅಭಾವಕ್ಕೆ ಪರಿಹಾರವನ್ನು ನೀಡಿದ ರಾಜ್ಯಗಳಲ್ಲಿ ಪಂಜಾಬ್ ಪಾತ್ರ ಹಿರಿದು. ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲ, ದೇಶ ಕಾಯುವಲ್ಲೂ ಪಂಜಾಬಿಗರ ಕೊಡುಗೆ ಬಹುದೊಡ್ಡದಿದೆ. ಸ್ವಾತಂತ್ರ ಹೋರಾಟದಲ್ಲಿ ಪಂಜಾಬ್‌ನ ಜಲಿಯನ್‌ವಾಲಾಬಾಗ್‌ನ ತೂಕ, ಇಡೀ ದೇಶದ ಒಟ್ಟು ಬಲಿದಾನದ ತೂಕಕ್ಕೆ ಸಮಾನಾಗಿದೆ. ಸ್ವಾತಂತ್ರ ಹೋರಾಟದಲ್ಲಿ ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ಪಂಜಾಬಿಗರ ಕೊಡುಗೆಯನ್ನು ಯಾವ ರೀತಿಯಲ್ಲೂ ನಾವು ನಿರ್ಲಕ್ಷಿಸುವಂತಿಲ್ಲ. 80ರ ದಶಕದಲ್ಲಿ ಪಂಜಾಬನ್ನು ಸರಕಾರ ಕಡೆಗಣಿಸುತ್ತಿರುವುದನ್ನು ಗಮನಿಸಿ ಅಲ್ಲಿ ಪ್ರತ್ಯೇಕವಾದ ಬೆಳೆಯ ತೊಡಗಿತು. ಅಂತಿಮವಾಗಿ ಅದು ಇಂದಿರಾಗಾಂಧಿಯ ಕಾಲದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಅಂತ್ಯವಾಯಿತು. ಜೊತೆಗೆ ಇಂದಿರಾಗಾಂಧಿಯನ್ನೂ ಬಲಿ ಪಡೆಯಿತು. ಆದರೆ ಪಂಜಾಬ್ ಎಂದರೆ ಈ ಪ್ರತ್ಯೇಕವಾದವಷ್ಟೇ ಅಲ್ಲ ಎನ್ನುವುದನ್ನು ನಾವು ಗಮನದಲ್ಲಿಡಬೇಕು. ಇಂದು ಪಂಜಾಬ್ ಸಹಿತ ಉತ್ತರ ಭಾರತದ ರೈತರು ಸರಕಾರದ ಹೊಸ ಕೃಷಿ ಕಾಯ್ದೆಯ ವಿರುದ್ಧ ಬಂಡೆದ್ದಿರುವುದು ದೇಶದ ಹಿತದೃಷ್ಟಿಯಿಂದ. ಈ ರೈತರನ್ನು ನಾವು ಉಗ್ರವಾದಿಗಳಾಗಿ ಬಿಂಬಿಸಿದರೆ ಅದರಿಂದ ದೇಶಕ್ಕೇ ನಷ್ಟ. ಜೊತೆಗೆ ಮತ್ತೆ ಸಣ್ಣದಾಗಿ ಚಿಗುರೊಡೆಯುತ್ತಿರುವ ಖಾಲಿಸ್ತಾನ್ ಉಗ್ರರಿಗೆ ಇದರಿಂದ ಲಾಭ.

80ರ ದಶಕದಲ್ಲಿ ಪಂಜಾಬ್‌ನಲ್ಲಿ ಉಗ್ರವಾದ ಬೆಳೆದಿರುವುದು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನದೊಂದಿಗೆ. ಇದೀಗ ಪಂಜಾಬ್‌ನ ರೈತರು ದೇಶದ ರೈತರ ಬೇಡಿಕೆಗಳ ನೇತೃತ್ವವನ್ನು ವಹಿಸಿದ್ದಾರೆ. ಈ ರೈತರನ್ನೆಲ್ಲ ಉಗ್ರರು ಎಂದು ಕರೆಯುವುದರಿಂದ ರೈತರ ಪ್ರತಿಭಟನೆಯನ್ನು ಸರಕಾರ ಕುಂದಿಸಿದರೆ ಅದರ ಲಾಭವನ್ನು ಕೊಯ್ಯುವುದು ಖಾಲಿಸ್ತಾನ್‌ಉಗ್ರರಾಗಿದ್ದಾರೆ. ಸರಕಾರ ಈ ಮೂಲಕ, ಖಾಲಿಸ್ತಾನ್ ಉಗ್ರವಾದಿಗಳು ಪಂಜಾಬ್‌ನ ರೈತರ ಹಿತಾಸಕ್ತಿಯ ಹಿಂದಿದ್ದಾರೆ ಎಂದು ಪರೋಕ್ಷವಾಗಿ ಸಾರಿದಂತಾಯಿತು. ಇದನ್ನೇ ಬಳಸಿಕೊಂಡು ಖಾಲಿಸ್ತಾನ್ ಉಗ್ರರು ಪಂಜಾಬ್‌ನ ರೈತರ ಚಳವಳಿಯನ್ನು ಹೈಜಾಕ್ ಮಾಡಿಕೊಳ್ಳಬಹುದು.

ಎನ್‌ಆರ್‌ಸಿ ಹೋರಾಟವನ್ನು ‘ಉಗ್ರವಾದಿಗಳ ಕೃತ್ಯ’ವೆಂದು ಬಿಂಬಿಸಿ ನೂರಾರು ಯುವ ಹೋರಾಟಗಾರರನ್ನು ಜೈಲಿಗೆ ತಳ್ಳಿರುವ ಸರಕಾರ, ಅದೇ ಮಾದರಿಯಲ್ಲಿ ರೈತರ ಹೋರಾಟವನ್ನು ನಿರ್ವಹಿಸಲು ಹೊರಟಿದೆ. ಆದರೆ ಆ ದಾರಿಯಿಂದ ಪ್ರತಿಭಟನೆಯನ್ನು ದಮನಿಸುವುದು ಕಷ್ಟ ಎನ್ನುವುದು ಅಮಿತ್ ಶಾ ಅವರಿಗೆ ಅರ್ಥವಾದಂತಿದೆ. ಆದುದರಿಂದಲೇ ‘ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ನಾನು ಹೇಳಿಕೆ ನೀಡಿಲ್ಲ’ ಎನ್ನುವ ಸ್ಪಷ್ಟೀಕರಣವನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಆದರೂ ಬಿಜೆಪಿಯ ಇನ್ನಿತರ ಮುಖಂಡರು ಪ್ರತಿಭಟನೆಯ ಹಿಂದಿರುವ ರೈತರ ಆತಂಕಗಳನ್ನು ಒಪ್ಪಲು ಇನ್ನೂ ಸಿದ್ಧವಿಲ್ಲ. ಇದೇ ಸಂದರ್ಭದಲ್ಲಿ, ನೂತನ ಕೃಷಿ ನೀತಿಯಿಂದಾಗಿ ರೈತರಿಗೆ ಹೊಸ ಹಕ್ಕು, ಅವಕಾಶಗಳು ದೊರೆಯಲಿವೆ ಎಂದು ನರೇಂದ್ರ ಮೋದಿಯವರು ಭರವಸೆ ನೀಡಿದ್ದಾರೆ. ಇದೇ ನರೇಂದ್ರ ಮೋದಿಯವರು, ದೇಶಕ್ಕೆ ಒಳ್ಳೆಯದಾಗಲಿದೆ ಎಂದು ತೆಗೆದುಕೊಂಡ ಎಲ್ಲ ನಿರ್ಧಾರಗಳೂ ಈ ದೇಶವನ್ನು ಸರ್ವನಾಶ ಮಾಡಿರುವಾಗ ಈ ಹೊಸ ಕೃಷಿ ನೀತಿಯ ಕುರಿತಂತೆ ಮೋದಿಯ ಭರವಸೆಯನ್ನು ರೈತರು ನಂಬುವುದಾದರೂ ಹೇಗೆ?

ಈ ದೇಶದಲ್ಲಿ ಭ್ರಷ್ಟರು ಬಚ್ಚಿಟ್ಟುಕೊಂಡಿರುವ ಕಪ್ಪು ಹಣವನ್ನೆಲ್ಲ ಹೊರತರುತ್ತೇನೆ ಎಂಬ ಭರವಸೆಯೊಂದಿಗೆ ‘ನೋಟು ನಿಷೇಧ’ ಘೋಷಿಸಿದರು. ಯಾವುದೇ ಪೂರ್ವ ಯೋಜನೆಗಳಿಲ್ಲದ ಈ ಘೋಷಣೆಯಿಂದ ಅರ್ಥವ್ಯವಸ್ಥೆ ನುಚ್ಚು ನೂರಾಯಿತು. ‘‘ಐವತ್ತು ದಿನಗಳನ್ನು ಕೊಡಿ. ಸರಿಯಾಗದಿದ್ದಲ್ಲಿ ನನ್ನನ್ನು ಕೊಂದು ಹಾಕಿ’’ ಎಂದು ಪ್ರಧಾನಿಯವರು ಹೇಳಿಕೆ ನೀಡಿದರು. ಐವತ್ತು ದಿನವೇಕೆ ವರ್ಷಗಳುರುಳಿದವು. ಆದರೆ ಪರಿಸ್ಥಿತಿ ಹದಗೆಡುತ್ತಲೇ ಹೋಗಿದೆ. ಜಿಎಸ್‌ಟಿಯಿಂದ ತೆರಿಗೆ ಪದ್ಧತಿ ಸರಳವಾಗಲಿದೆ, ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು. ಆದರೆ ಜಿಎಸ್‌ಟಿ ಪರಿಹಾರ ಹಣವನ್ನು ನೀಡದೆ ರಾಜ್ಯಗಳಿಗೆ ವಂಚಿಸಿದರು. ವ್ಯಾಪಾರ ಉದ್ಯಮಗಳು ಜಿಎಸ್‌ಟಿಯಿಂದಾಗಿ ಇನ್ನಷ್ಟು ಜಟಿಲವಾಗಿ ಆರ್ಥಿಕತೆಯ ಮೇಲೆ ಗಾಯದ ಮೇಲೆ ಬರೆ ಎಳೆದಂತಾಯಿತು. ಹೀಗೆ ಜನರ ನಂಬಿಕೆಗೆ ಪದೇ ಪದೇ ದ್ರೋಹ ಎಸಗುತ್ತಾ ಬಂದಿರುವ ಪ್ರಧಾನಿಯ ಮಾತುಗಳನ್ನು ರೈತರು ನಂಬುವುದು ಕಷ್ಟ.

ರೈತರಿಗೆ ಅನುಕೂಲವಾಗುವ ಕಾಯ್ದೆಯೇ ಆಗಿದ್ದರೆ ಸಂಸತ್ತಿನಲ್ಲಿ ಆತುರಾತುರವಾಗಿ ಯಾವುದೇ ಚರ್ಚೆಗಳಿಲ್ಲದೆ ಈ ಕಾಯ್ದೆಯನ್ನು ಸರಕಾರ ಜಾರಿಗೊಳಿಸುತ್ತಿರಲಿಲ್ಲ. ಆದುದರಿಂದ ಸದ್ಯಕ್ಕೆ ನಿಶ್ಶರ್ಥವಾಗಿ ರೈತರ ಜೊತೆಗೆ ಮಾತುಕತೆ ನಡೆಸುವುದೇ ಸರಕಾರದ ಮುಂದಿರುವ ಏಕೈಕ ಆಯ್ಕೆ. ಯಾವುದೇ ರೈತರು ತಮಗೆ ಲಾಭದಾಯಕವಾಗಿರುವ ಕಾಯ್ದೆಗಳನ್ನು ತಿರಸ್ಕರಿಸಲಾರರು. ನೂರಾರು ಕಿ.ಮೀ. ಯಾತ್ರೆಯ ಮೂಲಕ ದಿಲ್ಲಿಗೆ ಆಗಮಿಸಿ ಅಲ್ಲಿನ ಚಳಿ-ಬಿಸಿಲನ್ನು ಸಹಿಸಿಕೊಂಡು ರೈತರು ಸರಕಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂದರೆ ಅದರಲ್ಲಿ ಒಂದಿಷ್ಟಾದರೂ ಸತ್ಯವಿರಬೇಕು ಎನ್ನುವುದನ್ನು ಪ್ರಧಾನಿ ಮೋದಿ ಗಮನಕ್ಕೆ ತೆಗೆದುಕೊಂಡು ರೈತರ ಮಾತುಗಳನ್ನು ಆಲಿಸಬೇಕು ಮತ್ತು ಅವರಿಗೆ ಅಗತ್ಯವಿಲ್ಲದ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯಲು ಹಿಂಜರಿಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News