ಲಂಚಕ್ಕೆ ಬೇಡಿಕೆ ಆರೋಪ: ಪರಿಸರ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ
Update: 2020-12-01 21:58 IST
ಬೆಂಗಳೂರು, ಡಿ.1: ನೀರಿನ ಶುದ್ದೀಕರಣ ಘಟಕ ಆರಂಭಿಸಲು ಪರವಾನಗಿ ನೀಡುವ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಪರಿಸರ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ವಿ.ಶಿವಕುಮಾರ್, ಉಪ ಪರಿಸರ ಅಧಿಕಾರಿ ಕೆ.ಎಂ.ಸೋಮಶೇಖರ್ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.
ಇಲ್ಲಿನ ರಾಜಾಜಿನಗರದ ನಿವಾಸಿಯೊಬ್ಬರು ದಾಸನಪುರ ಹೋಬಳಿಯ ಕಾಚೋಹಳ್ಳಿ ಗ್ರಾಮದಲ್ಲಿ ನೀರಿನ ಶುದ್ಧೀಕರಣ ಘಟಕ ತೆರೆಯಲು ಪರವಾನಿಗೆಗಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ದಾಸರಹಳ್ಳಿ ವಲಯದ ಪ್ರಾದೇಶಿಕ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿನ ಪರಿಸರ ಅಧಿಕಾರಿ ಕೆ.ವಿ.ಶಿವಕುಮಾರ್ ಪರವಾನಿಗೆ ನೀಡಲು 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಲಂಚ ಸ್ವೀಕಾರ ಪ್ರಕರಣ ಬೆಳಕಿಗೆ ಬಂದಿದೆ.