×
Ad

ಬಾಂಗ್ಲಾ ನಿವಾಸಿಗಳ ನೆಪದಲ್ಲಿ ಜೋಪಡಿ ತೆರವು: ಸೂರು ಕಳೆದುಕೊಂಡವರಿಗೆ ಪರಿಹಾರ ನೀಡಲು ಹೈಕೋರ್ಟ್ ನಿರ್ದೇಶನ

Update: 2020-12-01 22:48 IST

ಬೆಂಗಳೂರು, ಡಿ.1: ಬಾಂಗ್ಲಾ ವಲಸಿಗರೆಂಬ ಆರೋಪದಡಿ ಮಾರತ್‍ಹಳ್ಳಿಯ ಕರಿಯಮ್ಮನ ಅಗ್ರಹಾರದ ಜೋಪಡಿಗಳಲ್ಲಿ ವಾಸಿಸುತ್ತಿದ್ದವರನ್ನು ಬಲವಂತವಾಗಿ ತೆರವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರು ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಲು ನಿಗದಿಪಡಿಸಿರುವ ತಲಾ 29 ಸಾವಿರ ಹಣವನ್ನೂ ಪರಿಹಾರವಾಗಿ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಎಸ್.ವಿಶ್ವಜೀತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಕ್ಲಿಫ್ಟನ್ ರೋಜಾರಿಯೋ ಅವರು, ಸರಕಾರ ನಿರ್ವಸಿತರಾದ ಕಾರ್ಮಿಕರಿಗೆ ತಲಾ 14,100 ರೂಪಾಯಿಯಂತೆ ಪರಿಹಾರ ನೀಡುತ್ತಿದೆ. ಆದರೆ ಪುನರ್ವಸತಿ ಕಲ್ಪಿಸುವ ವಿಚಾರವಾಗಿ ಈವರೆಗೆ ಸೂಕ್ತ ನಿರ್ಣಯ ಕೈಗೊಂಡಿಲ್ಲ.

ಸೂರು ಕಳೆದುಕೊಂಡಿರುವ ಕಾರ್ಮಿಕರಿಗೆ ನಗರದ ಹೊರವಲಯ ಜಿಗಣಿ ಸಮೀಪ ಒಂದು ವರ್ಷದ ಮಟ್ಟಿಗೆ 10x10 ಅಳತೆಯ ತಾತ್ಕಾಲಿಕ ಶೆಡ್‍ಗಳನ್ನು ತಲಾ 29 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಹೇಳಿದೆ. ಆದರೆ, ಅಕ್ರಮ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡಿರುವ ಕಾರ್ಮಿಕರು ಈಗಾಗಲೇ ಅಕ್ಕಪಕ್ಕದ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಇವರ ಕೂಲಿ ಕೆಲಸಗಳು ಕೂಡ ಸುತ್ತಮುತ್ತಲೇ ಇದ್ದು, ಸರಕಾರ ವರ್ಷದ ಮಟ್ಟಿಗೆ ನೀಡುವ ತಾತ್ಕಾಲಿಕ ಶೆಡ್‍ಗಳಿಂದ ಯಾವುದೇ ಪ್ರಯೋಜವಾಗುವುದಿಲ್ಲ. ಹೀಗಾಗಿ, ಶೆಡ್ ನಿರ್ಮಿಸಲು ಸರಕಾರ ನಿಗದಿಪಡಿಸಿರುವ 29 ಸಾವಿರ ರೂಪಾಯಿಯನ್ನೂ ಈಗಾಗಲೇ ಘೋಷಿಸಿರುವ 14,100 ರೂಪಾಯಿ ಪರಿಹಾರದೊಂದಿಗೆ ನೀಡುವಂತೆ ನಿರ್ದೇಶಿಸಬೇಕು ಎಂದು ಕೋರಿದರು.

ಅಲ್ಲದೇ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾತ್ಕಾಲಿಕ ಶೆಡ್ ಗಳಿಗೆ ತೆರಳಲು ನಿರಾಕರಿಸಿರುವ ಕಾರ್ಮಿಕರಿಗೆ ಶೆಡ್ ನಿರ್ಮಿಸಲು ನಿಗದಿಪಡಿಸಿರುವ ಮೊತ್ತವನ್ನು ಪರಿಹಾರವಾಗಿ ನೀಡುವ ಕುರಿತು ಚರ್ಚಿಸಿದ ವಿಚಾರವನ್ನೂ ಪೀಠಕ್ಕೆ ವಿವರಿಸಿದರು.

ವಾದ ಪುರಸ್ಕರಿಸಿದ ಪೀಠ, ಸಂತ್ರಸ್ತರಿಗೆ ಪರಿಹಾರದ ಮೊತ್ತವಾಗಿ ನೀಡುತ್ತಿರುವ 14,100 ಹಾಗೂ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಕೊಡಲು ನಿಗದಿಪಡಿಸಿರುವ 29 ಸಾವಿರ ರೂ. ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸುವಂತೆ ಸರಕಾರಕ್ಕೆ ನಿರ್ದೇಶಿಸಿತು. ಅಲ್ಲದೇ ಅರ್ಹ ಸಂತ್ರಸ್ತರು ಪರಿಹಾರ ಪಡೆಯಲು ತಮ್ಮ ಬ್ಯಾಂಕ್ ವಿವರಗಳನ್ನು ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಜ.13ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News