ಕರ್ನಾಟಕದಲ್ಲಿ ಹೂಡಿಕೆ ಮಾಡಲು ಕಾನ್ಸುಲರ್ ಜನರಲ್‍ಗೆ ಸಿಎಂ ಯಡಿಯೂರಪ್ಪ ಆಹ್ವಾನ

Update: 2020-12-02 16:58 GMT

ಬೆಂಗಳೂರು, ಡಿ.2: ಪ್ರಸಕ್ತ ಸಾಲಿನ ಎಪ್ರಿಲ್-ಜೂನ್ ಅವಧಿಯಲ್ಲಿ ಕರ್ನಾಟಕವು, ದೇಶದ ಇತರ ರಾಜ್ಯಗಳಿಗಿಂತ ಅತಿ ಹೆಚ್ಚು ಅಂದರೆ 10,000 ಕೋಟಿ ರೂ.ವಿದೇಶಿ ನೇರ ಹೂಡಿಕೆ ಗಳಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ದೇಶಗಳ ಕಾನ್ಸುಲರ್ ಜನರಲ್‍ಗಳನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರಕಾರ ಕೈಗೊಂಡಿರುವ ಕ್ರಮಗಳನ್ನು ಮನವರಿಕೆ ಮಾಡಿಕೊಟ್ಟರು.

ಐಟಿ, ಐಟಿಇಎಸ್ ಸೇವೆಗಳು, ಯಂತ್ರೋಪಕರಣಗಳು, ಉತ್ಪಾದನೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ವಿವರಿಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಅವರು ಮನವಿ ಮಾಡಿದರು. 

ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ. ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ನೀತಿ ತರಲಾಗಿದೆ. ಇದರಿಂದಲೇ, ರಾಜ್ಯ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ಪಡೆದಿದೆ. ಜತೆಗೆ, ಜನವರಿಯಿಂದ ಮೇವರೆಗಿನ ಹೂಡಿಕೆ ಪ್ರಸ್ತಾಪಗಳಲ್ಲಿ ಶೇ.50ರಷ್ಟನ್ನು ತನ್ನದಾಗಿಸಿಕೊಂಡಿದೆ. ಹೂಡಿಕೆ ಪ್ರಸ್ತಾವಗಳ ಮೊತ್ತ 1.1 ಲಕ್ಷ ಕೋಟಿ ರೂ. ಎಂದು ಮುಖ್ಯಮಂತ್ರಿ ತಿಳಿಸಿದರು.

ಕೈಗಾರಿಕಾ ಕಾರಿಡಾರ್ ಗಳ ಅಭಿವೃದ್ಧಿಗೆ ನಮ್ಮ ಸರಕಾರ ಒತ್ತು ನೀಡಿದೆ. ತುಮಕೂರಿನಲ್ಲಿ 10,000 ಎಕರೆ ವಿಸ್ತೀರ್ಣದಲ್ಲಿ ದೇಶದ ಅತಿ ದೊಡ್ಡ ಕೈಗಾರಿಕಾ ಟೌನ್‍ಶಿಪ್ ಬರಲಿದೆ. ಅಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ನಾವು ಬದ್ಧ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಂತಹ ಎರಡನೇ ಹಂತದ ನಗರಗಳಲ್ಲಿ ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ, ಹೊಸ ಕೈಗಾರಿಕಾ ನೀತಿ 2020-2025 ಪರಿಚಯಿಸಿದೆ. ಜತೆಗೆ ಕಾರ್ಮಿಕ ಕಾನೂನಿನಲ್ಲಿ ತಂದಿರುವ ಸುಧಾರಣೆಗಳು, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿ ನೆರವಾಗಲಿದೆ. ನೀತಿ ಆಯೋಗ ಬಿಡುಗಡೆ ಮಾಡುವ ಹೊಸ ಆವಿಷ್ಕಾರಗಳ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ರಾಜ್ಯ ಅಗ್ರಸ್ಥಾನ ಪಡೆದಿದೆ. ನುರಿತ ಮಾನವ ಸಂಪನ್ಮೂಲ ಲಭ್ಯತೆ, ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಹಾಗೂ ಪೆರು, ಮಾಲಿ, ಸ್ಪೇನ್ ಸೇರಿದಂತೆ 13 ದೇಶಗಳ ಕಾನ್ಸುಲರ್ ಜನರಲ್‍ಗಳು ಭಾಗವಹಿಸಿದ್ದರು.

ಸುಮಾರು 250 ಶತಕೋಟಿ ಡಾಲರ್ ಆರ್ಥಿಕತೆಯ ಕರ್ನಾಟಕ, ಉತ್ತಮ ಪ್ರಗತಿ ಕಾಣುತ್ತಿದೆ. ಯಂತ್ರೋಪಕರಣಗಳು, ಬೃಹತ್ ಯಂತ್ರೋಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ, ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ರಾಜ್ಯ ಪ್ರಾಬಲ್ಯ ಹೊಂದಿದೆ. ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ ಅಗತ್ಯ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ರಾಜ್ಯ ಯಶಸ್ವಿಯಾಗಿದೆ.

ಗೌರವ್ ಗುಪ್ತ,  ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ

ಜಾಗತಿಕ ಪೂರೈಕೆ ಸರಪಳಿ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿರುವ ಸಂದರ್ಭದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸುವರ್ಣಾವಕಾಶ ಒದಗಿದೆ. ಕರ್ನಾಟಕವು ಭಾರತದ ಜ್ಞಾನ ರಾಜಧಾನಿಯಾಗಿದ್ದು, ಆವಿಷ್ಕಾರದಲ್ಲಿ ಮುಂಚೂಣಿ ಸಾಧಿಸಿದೆ.

ಗುಂಜನ್ ಕೃಷ್ಣ, ಕೈಗಾರಿಕಾಭಿವೃದ್ದಿ ಆಯುಕ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News