ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮರಾಠ ಅಭಿವೃದ್ಧಿ ನಿಗಮ ಪ್ರತಿ ಸುಟ್ಟು ಪ್ರತಿಭಟನೆ

Update: 2020-12-02 17:00 GMT

ಬೆಂಗಳೂರು, ಡಿ.2: ಮರಾಠ ಅಭಿವೃದ್ಧಿ ನಿಗಮವನ್ನು ಖಂಡಿಸಿ ಸಿಲಿಕಾನ್ ಸಿಟಿಯಲ್ಲಿ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಿಗಮ ರಚನಾ ಪ್ರಾಧಿಕಾರದ ಆದೇಶ ಪ್ರತಿ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆದೇಶ ಪ್ರತಿಗೆ ಬೆಂಕಿ ಹಚ್ಚಿ ಸರಕಾರ ಕೂಡಲೇ ನಿಗಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪೊಲೀಸರು ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಹಲವರನ್ನು ಬಂಧಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಡಿ.5ರಂದು ಕರ್ನಾಟಕ ಬಂದ್‍ಗೆ ಕನ್ನಡಿಗರು ತಯಾರಾಗಿದ್ದಾರೆ. ಯಡಿಯೂರಪ್ಪ ಸರಕಾರ ಬಂದ್ ವಿಫಲ ಮಾಡಲು ಸಕಲ ಪ್ರಯತ್ನ ಮಾಡುತ್ತಿದೆ. ಬಂದ್ ನೂರಕ್ಕೆ ನೂರು ಆಗೇ ಆಗುತ್ತೆ. ಕರ್ನಾಟಕದ ಜನತೆ ಡಿ.5ರಂದು ಬಸ್ ನಿಲ್ದಾಣಕ್ಕೆ ಬರಬೇಡಿ. ಹೋಟೆಲ್‍ಗಳಿಗೆ ಹೋಗಬೇಡಿ. ಬಂದ್‍ನಲ್ಲಿ ಕನ್ನಡಪರ ಸಂಘಟನೆಗಳ 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಆದೇಶದ ಪ್ರತಿಗೆ ಬೆಂಕಿ ಇಡುವ ಮೂಲಕ ತೀವ್ರವಾಗಿ ವಿರೋಧಿಸುತ್ತೇವೆ ಎಂದರು.

ಮರಾಠಿ ನಿಗಮವನ್ನು ಸಂಪೂರ್ಣ ವಿರೋಧಿಸುತ್ತೇವೆ. ಡಿ.5ರ ಬೆಳಗ್ಗೆ 10.30ಕ್ಕೆ ಲಕ್ಷಾಂತರ ಜನರಿಂದ ಬೃಹತ್ ಮೆರವಣಿಗೆ ಕೈಗೊಳ್ಳಲಿದ್ದೇವೆ. ಈ ಪ್ರತಿಭಟನೆಗೆ ತಡೆಯೊಡ್ಡಲು ಮುಂದಾಗಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಗಿರೀಶ್ ಗೌಡ, ಮಂಜುನಾಥ್ ದೇವ, ವೆಂಕಟೇಶ್, ಅಮ್ಮಿಚಂದ್ರು ಕನ್ನಡ ಕೃಷ್ಣ, ಜಿ.ಎಂ ರಾಮು, ಮುನ್ನಾವರ ಪಾರ್ಥಸಾರಥಿ, ವಿಶ್ವನಾಥ್ ಗೌಡ, ವೇಣುಗೋಪಾಲ್, ನರಸಿಂಹಮೂರ್ತಿ, ಜಾಫರ್ ಸಾಧಿಕ್ ಸೇರಿ ನೂರಾರು ಮುಖಂಡರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News