ಆಗಾಗ್ಗೆ ಹೊಟ್ಟೆನೋವು ಕಾಡಲು ಕಾರಣಗಳು ಗೊತ್ತೇ?

Update: 2020-12-02 18:02 GMT

ನಿಮ್ಮ ಶರೀರದ ಇತರ ಭಾಗಗಳಲ್ಲಿ ಅಸ್ವಸ್ಥತೆಯಿದ್ದರೆ ಅದು ಹೊಟ್ಟೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ಜಠರ,ಸಣ್ಣ ಕರುಳು,ದೊಡ್ಡ ಕರುಳು,ಯಕೃತ್ತು,ಪಿತ್ತಕೋಶ ಮತ್ತು ಮೇದೋಜ್ಜೀರಕ ಗ್ರಂಥಿ ಇವು ಇಂತಹ ಭಾಗಗಳಾಗಿವೆ. ಇವು ಅನಾರೋಗ್ಯಕ್ಕೆ ಗುರಿಯಾದಾಗ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಇದು ಸುದೀರ್ಘ ಕಾಲ ಸಹ ಕಾಡಬಹುದು. ಒಂದೆರಡು ದಿನಗಳ ಕಾಲ ಹೊಟ್ಟೆನೋವು ಮರುಕಳಿಸುತ್ತಲೇ ಇದ್ದರೆ ಅದನ್ನು ರೆಕರಿಂಗ್ ಅಬ್ಡಾಮಿನಲ್ ಪೇನ್ (ಆರ್‌ಎಪಿ) ಎಂದು ಕರೆಯಲಾಗುತ್ತದೆ. ಇಂತಹ ನೋವು ದಿಢೀರ್ ಆಗಿ ಕಾಣಿಸಿಕೊಳ್ಳುತ್ತದೆ. ವಾಕರಿಕೆ ಮತ್ತು ವಾಂತಿಯೂ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ನೋವನ್ನು ತಡೆದುಕೊಳ್ಳುವ ಪ್ರಯತ್ನದ ಬದಲು ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

ಕಾರಣಗಳು

ಹೊಟ್ಟೆನೋವನ್ನು ವಯಸ್ಸಿನ ಆಧಾರದಲ್ಲಿ ವರ್ಗೀಕರಿಸಲಾಗಿದೆ. ನೋವು ಅಥವಾ ಸೆಳೆತಗಳು ಸೌಮ್ಯದಿಂದ ತೀವ್ರ ಸ್ವರೂಪದ್ದಾಗಿರಬಹುದು. ಆತಂಕ,ಖಿನ್ನತೆ,ಮೂತ್ರನಾಳ ಸೋಂಕು ಇವೂ ಇಂತಹ ಹೊಟ್ಟೆನೋವಿನೊಂದಿಗೆ ಗುರುತಿಸಿಕೊಂಡಿವೆ.

ಜಂತು ಸೋಂಕು,ಬೀಜಗಳ ಸೇವನೆ,ಕೊಲೈಟಿಸ್ ಅಥವಾ ಕರುಳಿನ ಉರಿಯೂತ,ಅತಿಸಾರ,ಅಪೆಂಡಿಸೈಟಿಸ್,ಮೂತ್ರಪಿಂಡ ಕಲ್ಲುಗಳು ಇವು ಮಕ್ಕಳಲ್ಲಿ ಆರ್‌ಎಪಿ ಕಾಣಿಸಿಕೊಳ್ಳಲು ಹೆಚ್ಚು ಸಾಮಾನ್ಯವಾದ ಕಾರಣಗಳಾಗಿವೆ.

ವಯಸ್ಕರಲ್ಲಿ ಮೂತ್ರಪಿಂಡ ಕಲ್ಲುಗಳು,ಕರುಳಿನ ಸೋಂಕು,ಅತಿಸಾರ,ಋತುಬಂಧ,ಹೊಟ್ಟೆಯಲ್ಲಿ ಸೋಂಕು ಇವು ಮರುಕಳಿಸುವ ಹೊಟ್ಟೆನೋವನ್ನುಂಟು ಮಾಡುತ್ತವೆ.

ಹೊಟ್ಟೆನೋವನ್ನು ಶಮನಿಸಲು ಸರಳ ಉಪಾಯಗಳು

ಇಂತಹ ಹೊಟ್ಟೆನೋವು ಸಾಮಾನ್ಯವಾಗಿ 2-3 ಗಂಟೆಗಳ ಕಾಲ ಇರುತ್ತದೆ. 12 ಗಂಟೆಗಳಿಗೂ ಅಧಿಕ ಕಾಲ ಹೊಟ್ಟೆನೋವಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಅಲ್ಲದೆ ಕೆಲವು ನೋವುಗಳು ಅಪಾಯಕಾರಿಯೂ ಆಗಬಹುದು. ಹೊಟ್ಟೆನೋವನ್ನು ಶಮನಿಸಲು ಮನೆಯಲ್ಲಿಯೇ ಅನುಸರಿಸಬಹುದಾದ ಕೆಲವು ಸರಳ ಉಪಾಯಗಳಿಲ್ಲಿವೆ......

* ಸಾಕಷ್ಟು ನೀರಿನ ಸೇವನೆ

ಹೆಚ್ಚು ನೀರನ್ನು ಸೇವಿಸುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ. ಶರೀರದಲ್ಲಿ ನಿರ್ಜಲೀಕರಣಕ್ಕೆ ಅವಕಾಶ ನೀಡದಿರುವುದು ಮುಖ್ಯವಾಗಿದೆ. ಸಾಕಷ್ಟು ನೀರನ್ನು ಸೇವಿಸುವುದರಿಂದ ಹೆಚ್ಚು ಮೂತ್ರ ವಿಸರ್ಜನೆಯಾಗುತ್ತದೆ ಮತ್ತು ನೋವಿನಿಂದ ಮುಕ್ತಿಯೂ ದೊರೆಯುತ್ತದೆ.

* ಬೀಜಗಳು ಮತ್ತು ನಾರಿನ ಸೇವನೆ ಬೇಡ

ಕರುಳಿನ ಸೋಂಕು ಹೊಟ್ಟೆನೋವಿಗೆ ಕಾರಣವಾಗಿದ್ದರೆ ಬೀಜಗಳು ಮತ್ತು ನಾರನ್ನು ದೂರವಿಟ್ಟು,ಮೃದು ಆಹಾರವನ್ನು ಸೇವಿಸಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.

* ಹಾಲಿನಿಂದ ದೂರವಿರಿ

ಭೇದಿಯುಂಟಾಗುತ್ತಿದ್ದರೆ ಹಾಲಿನಿಂದ ದೂರವಿರಬೇಕು. ಮೊಸರಿನಿಂದ ತಯಾರಾದ ಆಹಾರಗಳನ್ನು ಹೆಚ್ಚು ಸೇವಿಸಿ. ಹಾಲನ್ನು ಸೇವಿಸುವುದರಿಂದ ವಾಯು ಮತ್ತು ಹೊಟ್ಟೆಯುಬ್ಬರ ಉಂಟಾಗುತ್ತದೆ,ಹೀಗಾಗಿ ಇಂತಹ ಸಂದರ್ಭಗಳಲ್ಲಿ ಹಾಲನ್ನು ಸೇವಿಸಬಾರದು.

* ಬಿಸಿನೀರಿನ ಶಾಖ

ಬಿಸಿನೀರಿನ ಬ್ಯಾಗ್‌ನಿಂದ ಪೀಡಿತ ಭಾಗದಲ್ಲಿ ಶಾಖ ನೀಡಿದರೆ ನೋವು ಮತ್ತು ಸೆಳೆತಗಳು ಕಡಿಮೆಯಾಗುತ್ತವೆ. ಬಿಸಿಯ ಒತ್ತಡವು ಹೊಟ್ಟೆಯ ಸ್ನಾಯುಗಳನ್ನು ಸಡಿಲಿಸುವ ಮೂಲಕ ನೋವು ನಿವಾರಕವಾಗಿ ಕಾರ್ಯ ಮಾಡುತ್ತದೆ.

ನಿರಂತರ ಹೊಟ್ಟೆನೋವಿಗೆ ಚಿಕಿತ್ಸೆ

ಹೊಟ್ಟೆನೋವು ಕೇವಲ ಅಜೀರ್ಣಕ್ಕೆ ಸೀಮಿತವಲ್ಲ,ಅದು ಮೇಲೆ ಹೇಳಲಾಗಿರುವ ಇತರ ಕಾರಣಗಳಿಂದಲೂ ಉಂಟಾಗುತ್ತದೆ. ಪ್ಯಾರಾಸಿಟಮಲ್,ಮೆಫ್ಟಾಲ್‌ನಂತಹ ಯಾವುದೇ ನೋವು ನಿವಾರಕ ಮಾತ್ರೆಯನ್ನು ಇಂತಹ ನೋವನ್ನು ಶಮನಿಸಲು ಬಳಸಬಹುದು.ಇವು ಕರುಳಿನ ಸೆಳೆತವನ್ನು ಕಡಿಮೆ ಮಾಡುತ್ತವೆ.

ಹೊಟ್ಟೆನೋವು ಆಗಾಗ್ಗೆ ಮರುಕಳಿಸುತ್ತಿದ್ದರೆ ವೈದ್ಯರು ಸೂಚಿಸಿರುವ ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಕೇ ಹೊರತು ಸ್ವಯಂ ವೈದ್ಯರಾಗುವುದು ಬೇಡ. ಪ್ರಬಲ ನೋವು ನಿವಾರಕ ಮಾತ್ರೆಗಳು ಹೊಟ್ಟೆನೋವು ಮತ್ತು ಸೆಳೆತಗಳನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಕರುಳಿನಲ್ಲಿ ತೊಂದರೆಯಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು ಮತ್ತು ಅದನ್ನು ಹೆಚ್ಚು ಸಮಯ ವಿಳಂಬಿಸುವಂತಿಲ್ಲ.

ಇಂತಹ ಮರುಕಳಿಸುವ ಹೊಟ್ಟೆನೋವನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು. ಇಂತಹ ಪ್ರಕರಣಗಳಲ್ಲಿ ನೋವಿನ ಲಕ್ಷಣಗಳು ಮುಖ್ಯವಾಗುತ್ತವೆ ಮತ್ತು ಅವುಗಳನ್ನು ಸಕಾಲದಲ್ಲಿ ವೈದ್ಯರ ಗಮನಕ್ಕೆ ತರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News