''ರೈತರೇ, ನಿಮ್ಮೊಂದಿಗೆ ನಾವಿದ್ದೇವೆ'': ರೈತರ ಮೇಲಿನ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2020-12-02 18:05 GMT

ಬೆಂಗಳೂರು, ಡಿ.2: ಕೇಂದ್ರ ಸರಕಾರದ ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ನಡೆಯುತ್ತಿರುವ ರೈತ ಚಳವಳಿಗಾರರ ಮೇಲಿನ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಎಡಪಕ್ಷಗಳು ಹಾಗೂ ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳು ನಗರದಲ್ಲಿಂದು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

‘ಹೋರಾಟನಿರತ ರೈತರೇ, ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಘೋಷಣೆಯೊಂದಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಎಐಡಿವೈಓ ಯುವಜನ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ, ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಹಾಗೂ ಮತ್ತಿತರೆ ಎಡಪಕ್ಷಗಳ ಕಾರ್ಯಕರ್ತರು ದಿಲ್ಲಿಯಲ್ಲಿ ನಡೆಯುತ್ತಿರುವ ಚಳವಳಿಯನ್ನು ಬೆಂಬಲಿಸಿ ಹೋರಾಟ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಸಂಘಟನೆಯ ಕಾರ್ಯದರ್ಶಿ ಶೋಭಾ, ಹಲವು ರಾಜ್ಯಗಳ ಲಕ್ಷಾಂತರ ರೈತರು ದೇಶದ ರಾಜಧಾನಿ ದಿಲ್ಲಿಯಲ್ಲಿ ಸರಕಾರದ ರೈತವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ. ಪ್ರಜಾತಾಂತ್ರಿಕ ವಿರೋಧಿಯಾಗಿ ಸುಗ್ರಿವಾಜ್ಞೆಗಳ ಮೂಲಕ ಜಾರಿಯಾಗಿರುವ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಆದರೆ, ಸರಕಾರ ರೈತರಿಗೆ ಸ್ಪಂದಿಸಲು ಮುಂದಾಗಿಲ್ಲ ಎಂದು ದೂರಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ವಿದ್ಯುತ್ ಬಿಲ್ ತಿದ್ದುಪಡಿ ಕಾಯ್ದೆಗಳು ಕಾರ್ಪೊರೇಟ್ ಕಂಪೆನಿಗಳಿಗೆ ಮುಕ್ತ ಅವಕಾಶ ನೀಡುತ್ತಾ, ರೈತರಿಗೆ ಮರಣಶಾಸನವಾಗಿವೆ. ರೈತರು ತಾವು ಬೆಳೆದ ಬೆಳೆಯನ್ನು ಯಾರಿಗಾದರೂ ಮಾರಲು ಸ್ವತಂತ್ರರು ಮತ್ತು ಈ ಕಾಯ್ದೆ ಪ್ರಸಕ್ತ ಭ್ರಷ್ಟ ವ್ಯವಸ್ಥೆಯಿಂದ ರೈತರನ್ನು ರಕ್ಷಿಸಲಿದೆ ಎಂದು ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ. ಆದರೆ ವಾಸ್ತವದಲ್ಲಿ ಈ ಕಾಯ್ದೆಗಳು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಎಂದು ಆಪಾದಿಸಿದರು.

ಎಐಡಿವೈಓನ ಜಿಲ್ಲಾ ಕಾರ್ಯದರ್ಶಿ ಜಯಣ್ಣ ಮಾತನಾಡಿ, ರೈತರ ಬಗ್ಗೆ ಕಾಳಜಿಯಿರುವಂತೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಸರಕಾರ ರೈತರ ನಾಯಯುತ ಹೋರಾಟವನ್ನು ಹತ್ತಿಕ್ಕಲು ನಡೆಸುತ್ತಿರುವ ಹುನ್ನಾರ ನಿಜಕ್ಕೂ ಅಮಾನವೀಯವಾಗಿದೆ. ದಾರಿಗೆ ಅಡ್ಡಲಾಗಿ ಗುಂಡಿ ತೋಡಿ, ಸಿಮೆಂಟ್ ಬ್ಯಾರಿಕೇಡ್‍ಗಳನ್ನು ಹಾಕಿ, ಜಲಫಿರಂಗಿ ಮತ್ತು ಟಿಯರ್ ಗ್ಯಾಸ್ ಬಳಸಿ ಹೋರಾಟವನ್ನು ಹತ್ತಿಕ್ಕಲು ಸರಕಾರ ಯತ್ನಿಸಿರುವುದು ಖಂಡನಾರ್ಹ ಎಂದು ತಿಳಿಸಿದರು.

ಸಿಪಿಎಂ ಉತ್ತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ ಸಿಂಹ ಮಾತನಾಡಿ, ಬಹು ದೊಡ್ಡ ಮಾರುಕಟ್ಟೆ ಹೊಂದಿರುವ ಕಾರ್ಪೊರೇಟ್ ಕಂಪನಿಗಳು ಎಂಎನ್‍ಸಿಗಳ ಜೊತೆ ಕೈಜೋಡಿಸಿವೆ. ತಾವು ನಿಗದಿ ಪಡಿಸಿದ ಬೆಲೆಯಲ್ಲಿ ಉತ್ಪನ್ನಗಳನ್ನು ಕೊಳ್ಳುತ್ತಾರೆ. ಸರಕಾರವು ಈ ಕಂಪನಿಗಳು ನಿಗದಿತ ಪಡಿಸಿದ ದರದಲ್ಲಿಯೇ ಕೊಂಡುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಕೃತಕವಾಗಿ ಕೊರತೆಯನ್ನು ಸೃಷ್ಟಿಸಿ ಮುಂದೆ ಬೆಲೆ ಏರಿಕೆಗೂ ಇದು ಅವಕಾಶ ಮಾಡಿಕೊಡಲಿದೆ. ಹಾಗಾಗಿ ಇದು ಕೇವಲ ರೈತ ವಿರೋಧಿ ಅಷ್ಟೇ ಅಲ್ಲ, ಇಡೀ ಜನ ಸಮುದಾಯವನ್ನೆ ಸಂಕಷ್ಟಕ್ಕೆ ನೂಕುವ ಕರಾಳ ಕಾಯ್ದೆಗಳಾಗಿವೆ ಎಂದು ಹೇಳಿದರು.

ಸರಕಾರ ಜಾರಿಗೆ ತಂದಿರುವ ಕರಾಳ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ಜನರು ದಿಲ್ಲಿಯ ಗಡಿಯಲ್ಲಿ ಸೇರಿದ್ದಾರೆ. ಅಲ್ಲದೆ, ಇಡೀ ದೇಶದ ಮೂಲೆ ಮೂಲೆಯಿಂದಲೂ ರೈತರ ಹೋರಾಟಕ್ಕೆ ಹೊಸ ಸ್ಪೂರ್ತಿಯನ್ನೇ ನೀಡಲಾಗುತ್ತಿದೆ. ಕೂಡಲೇ ಕೇಂದ್ರ ಸರಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಬೇಕು. ಇಲ್ಲದಿದ್ದಲ್ಲಿ ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂನ ಮೀನಾಕ್ಷಿ ಸುಂದರಂ, ಪ್ರಕಾಶ್, ನವೀನ್, ದಿಲೀಪ್, ಎಐಎಂಎಸ್‍ಎಸ್ ಹಾಗೂ ಎಐಡಿವೈಓ ಸಂಘಟನಾಕಾರರಾದ ರುಕ್ಮಿಣಿ, ಸಿಂಧೂರ, ರಾಧಿಕ, ಪ್ರಶಾಂತ್, ಪೂರ್ಣಿಮ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News