ಅಕ್ರಮ ವ್ಯವಹಾರ ಆರೋಪ: ಬಿಜೆಪಿ ನಾಯಕರ ಮುಖವಾಡ ತೊಟ್ಟು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು, ಡಿ.3: ಬಿಜೆಪಿ ನಾಯಕರಾದ ಸಿ.ಪಿ. ಯೋಗೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಮುಂಭಾಗ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ನಾಯಕರ ಮುಖವಾಡ ತೊಟ್ಟು ವಿನೂತನವಾಗಿ ಪ್ರತಿಭಟಿಸಿ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಎಸ್.ಮನೋಹರ್, ಬಿಜೆಪಿ ನಾಯಕ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್, ವಿಧಾನ ಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಚುನಾವಣೆ ಸಂದರ್ಭದಲ್ಲಿ ತಲುಪಿಸಿದ ದೊಡ್ಡ ಮೊತ್ತದ ಹಣ ತಲುಪಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಈ ಪ್ರಕರಣದಿಂದ ಬಿಜೆಪಿಯು ಮೈತ್ರಿ ಸರಕಾರ ಪತನಗೊಳಿಸಲು ಅಕ್ರಮ ಹಣ ಬಳಸಿದ್ದು ಮತ್ತೊಮ್ಮೆ ಸಾಬೀತಾಗಿದೆ. ಐಡಿ, ಇಡಿ, ಸಿಬಿಐಯ ಅಧಿಕಾರಿಗಳು ವಿಶ್ವನಾಥ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮುಖಂಡರಾದ ಜಿ.ಜನಾರ್ಧನ್, ಎ.ಆನಂದ್, ಈ.ಶೇಖರ್, ಎಲ್.ಜಯಸಿಂಹ ಸೇರಿದಂತೆ ಪ್ರಮುಖರಿದ್ದರು..
ಬಿಜೆಪಿ ನಾಯಕರ ವಿರುದ್ಧ ದೂರು
ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆ ಸಂಬಂಧ ಕಾಂಗ್ರೆಸ್ ನಿಯೋಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದೆ.
ಹುಣಸೂರು ಉಪಚುನಾವಣೆ ಖರ್ಚಿಗೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಣ ನೀಡಿದ್ದರು. ಆದರೆ, ಅದನ್ನು ಸಂತೋಷ್ ಮತ್ತು ಯೋಗೇಶ್ವರ್ ಖರ್ಚು ಮಾಡಲಿಲ್ಲ. ಹೀಗಾಗಿ ನಾನು ಸೋಲಬೇಕಾಯಿತು ಎಂದು ಇತ್ತೀಚಿಗೆ ವಿಶ್ವನಾಥ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷವು, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದ ನಿಯೋಗ ಎಸಿಬಿಯಲ್ಲಿ ದೂರು ದಾಖಲಿಸಿದೆ.
25 ಕೋಟಿ ರೂ. ಹಣ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಎಲ್ಲಾ ಹಣ ಎಲ್ಲಿಂದ ಬಂದಿದೆ ಎನ್ನುವ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದೆ.