ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ ಪ್ರದಾನ

Update: 2020-12-03 17:41 GMT

ಬೆಂಗಳೂರು, ಡಿ.3: ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಇಂದು ನಡೆದ ವರ್ಚುವಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಅತ್ಯುತ್ತಮ ಸಾಧನೆ ತೋರಿದ ವಿಜೇತರಿಗೆ 2020ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಒಂದು ಚಿನ್ನದ ಪದಕ, ಪ್ರಮಾಣಪತ್ರ ಮತ್ತು ಒಂದು ಲಕ್ಷ ಅಮೆರಿಕನ್ ಡಾಲರ್ ಹಣವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಈ ಆರು ಕ್ಷೇತ್ರಗಳಲ್ಲಿ ಅತ್ಯುದ್ಭುತ ಸಾಧನೆ ತೋರಿದವರಿಗೆ ನೀಡಲಾಯಿತು.

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವೀಯತೆ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ನೀಡಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಮೆರಿಕದ ನ್ಯೂಯಾರ್ಕ್‍ನ ಕೌರಂಟ್‍ನ ಇನ್ಸ್‍ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಪ್ರೊಫೆಸರ್ ಮತ್ತು ಅಬೆಲ್ ಪ್ರಶಸ್ತಿ ವಿಜೇತ ಪ್ರೊ.ಎಸ್.ಆರ್.ಶ್ರೀನಿವಾಸ್ ವರ್ಧನ್ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಭಾರತದ ಪ್ರತಿ ಬಡ ಮಕ್ಕಳು ಪೌಷ್ಠಿಕಾಂಶ, ಶಿಕ್ಷಣ, ಆರೋಗ್ಯ ಮತ್ತು ಆಶ್ರಯವನ್ನು ಪಡೆಯಬಹುದು ಎಂಬ ಕನಸು ಕಾಣಲಾಗುತ್ತಿದೆ. ಈ ಮಕ್ಕಳು ಉತ್ತಮ ಭವಿಷ್ಯದ ಆತ್ಮವಿಶ್ವಾಸ ಹೊಂದಿರಬೇಕು ಎಂದು ನಾವು ಬಯಸುತ್ತೇವೆ ಎಂದರು.

ನಮಗೆ ಭ್ರಷ್ಟಾಚಾರ ರಹಿತ ಮತ್ತು ತ್ವರಿತ ಕಾರ್ಯಗತಗೊಳ್ಳುವ ಉತ್ತಮ ಚಿಂತನೆ ಮತ್ತು ಪರಿಣಾಮಕಾರಿ ವಿಚಾರಗಳ ಅವಶ್ಯಕತೆಯಿದೆ. ಅಭಿವೃದ್ಧಿ ಹೊಂದಿದ ದೇಶಗಳು, ಉನ್ನತ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಯಶಸ್ವಿಯಾಗಿವೆ. ನಮ್ಮ ಜಗತ್ತನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಗೌರವಿಸುವ ಮೂಲಕ ಇನ್ಫೋಸಿಸ್ ಪ್ರಶಸ್ತಿ ಭಾರತದಲ್ಲಿ ಈ ಕಾರ್ಯಾಚರಣೆಗೆ ಕೊಡುಗೆ ನೀಡುತ್ತದೆ ಎಂದಿದ್ದಾರೆ.

ವರ್ಚುವಲ್ ಸಮಾರಂಭದಲ್ಲಿ ಇನ್ಫೋಸಿಸ್ ಸೈನ್ಸ್ ಫೌಂಡೇಶನ್‍ನ ಟ್ರಸ್ಟಿಗಳಾದ ಶ್ರೀನಾಥ್ ಬಟ್ನಿ, ಕೆ.ದಿನೇಶ್, ಎಸ್. ಗೋಪಾಲಕೃಷ್ಣನ್, ನಂದನ್ ನಿಲೇಕಣಿ, ಮೋಹನ್ದಾಸ್ ಪೈ, ಮತ್ತು ಎಸ್.ಡಿ.ಶಿಬುಲಾಲ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಮತ್ತು ವ್ಯಾಪಾರ ಕ್ಷೇತ್ರದ ಮುಖಂಡರು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News