ಮಾಸ್ಕ್ ಹಾಕದವರಿಗೆ ದಂಡ: ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ !

Update: 2020-12-03 17:59 GMT
ಸಾಂದರ್ಭಿಕ ಚಿತ್ರ

ಯಾದಗಿರಿ, ಡಿ.3: ಕೊರೋನ ಸೋಂಕು ಹರಡುವುದನ್ನು ತಪ್ಪಿಸಲು ಸರಕಾರ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿರುವ ಅಧಿಕಾರಿಗಳ ಮೇಲೆಯೇ ಜನರು ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.

ಕರ್ನಾಟಕದಲ್ಲಿ ಎರಡನೇ ಕೊವೀಡ್ ಅಲೆ ಕಾಣಿಸಿಕೊಳ್ಳಲಿದೆ ಎಂದು ಈಗಾಗಲೇ ಆರೋಗ್ಯ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಎರಡನೇ ಕೊರೋನ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸುರಕ್ಷಿತ ಅಂತರ ಕಾಪಾಡಬೇಕು ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಯಾದಗಿರಿ ನಗರದಲ್ಲಿ ಜನರು ಕೊವೀಡ್ ನಿಯಮ ಪಾಲನೆ ಮಾಡದೆ ಉಲ್ಲಂಘನೆ  ಮಾಡುತ್ತಿದ್ದು, ಇದನ್ನು ಕಡಿವಾಣ ಹಾಕಲು ನಗರಸಭೆ ಅಧಿಕಾರಿಗಳು ಮಾಸ್ಕ್ ಧರಿಸದೆ ಇರುವವರಿಗೆ ಬುದ್ಧಿ ಮಾತು ಹೇಳಿ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ನಗರ ಸಭೆ ಅಧಿಕಾರಿಗಳು ನಾಲ್ಕು ತಂಡ ರಚಿಸಿ ದಂಡ ಹಾಕುತ್ತಿದ್ದಾರೆ. ಆದರೆ, ಮಾಸ್ಕ್ ಧರಿಸದೆ ಇರುವ ವ್ಯಕ್ತಿಗೆ ದಂಡ ಹಾಕಿದರೆ ನಗರಸಭೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಇದರ ಪರಿಣಾಮವಾಗಿ ನಗರಸಭೆ ಅಧಿಕಾರಿಗಳು ದಂಡ ಹಾಕುವುದನ್ನು ಸ್ಥಗಿತ ಮಾಡಿದ್ದಾರೆ.

ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಿದರೆ ದಂಡ ಹಾಕುವುದಾಗಿ ಅಧಿಕಾರಿಗಳು ಮೇಲಧಿಕಾರಿಗಳಿಗೆ ಹೇಳಿದ್ದಾರೆ. ನಂತರ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರು ದಂಡ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ಆತಂಕದ ನಡುವೆಯೂ ಇದೀಗ ದಂಡ ಹಾಕುವುದನ್ನು ಮುಂದುವರಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಬಕ್ಕಪ್ಪ, ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಲಾಗುತ್ತಿದ್ದು, ಕೆಲ ಜನರು ಜಗಳ ಮಾಡುತ್ತಿದ್ದಾರೆ. ಹೀಗಾಗಿ, ಕೆಲ ದಿನ ದಂಡ ಹಾಕುವುದನ್ನು ಸ್ಥಗಿತ ಮಾಡಲಾಗಿತ್ತು. ಈಗ ಮತ್ತೆ ದಂಡ ಹಾಕಲಾಗುತ್ತಿದೆ. ಸಾರ್ವಜನಿಕರು ಕೊವೀಡ್ ಜಾಗೃತಿ ವಹಿಸಿ ಮಾಸ್ಕ್ ಹಾಕುವುದರ ಜೊತೆಗೆ ನಿಯಮ ಪಾಲನೆ ಮಾಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News