ಉಸಿರಾಡಲೂ ಬಿಬಿಎಂಪಿಗೆ ಶುಲ್ಕ ಕಟ್ಟಬೇಕೆ: ಆಮ್ ಆದ್ಮಿ ಪಕ್ಷ ಪ್ರಶ್ನೆ

Update: 2020-12-04 17:31 GMT

ಬೆಂಗಳೂರು, ಡಿ.4: ಮನೆ ಮುಂದೆ ವಾಹನಗಳನ್ನು ನಿಲ್ಲಿಸಿದರೂ ಶುಲ್ಕ ಕಟ್ಟಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಿರುವ ಬಿಬಿಎಂಪಿ ಆಯುಕ್ತರ ನಿರ್ಧಾರ ನೋಡಿದರೆ ನಾವು ಬ್ರಿಟಿಷರ ಆಡಳಿತದಲ್ಲಿ ಇದ್ದೇವೇನೊ ಎನ್ನುವ ಭಾವನೆ ಬರುತ್ತಿದೆ. ಲಗಾನ್ ಸಿನಿಮಾದ ಸಂಭಾಷಣೆ ‘ತೀನ್ ಗುನಾ ಲಗಾನ್ ಲಗೇಗಾ’(ಮೂರು ಪಟ್ಟು ತೆರಿಗೆ ಕಟ್ಟಬೇಕು) ಈ ಸಂದರ್ಭದಲ್ಲಿ ನೆನಪಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದರು.

ಶುಕ್ರವಾರ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಭಾರಿ ಪ್ರಮಾಣದಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡಲು ಬಿಬಿಎಂಪಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಉಸಿರಾಡುವುದಕ್ಕೂ ಬಿಬಿಎಂಪಿ ಶುಲ್ಕ ವಿಧಿಸಬಹುದು ಎಂದರು.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ ಎನ್ನುವುದೇ ಅತ್ಯಂತ ಮೂರ್ಖತನದ ಹಾಗೂ ಅವೈಜ್ಞಾನಿಕ ನಿರ್ಧಾರ. ಈಗಾಗಲೇ ನಗರದ ಅನೇಕ ಕಡೆ ಪಾರ್ಕಿಂಗ್ ದಂಧೆ ನಡೆಯುತ್ತಿದ್ದು ಇದನ್ನೇ ಸರಿಯಾಗಿ ನಿಭಾಯಿಸಲು ಕಷ್ಟ ಪಡುತ್ತಿರುವ ಸರಕಾರ ಇನ್ನು ಇಡೀ ಬೆಂಗಳೂರನ್ನು ಸುಧಾರಿಸುವುದಕ್ಕೆ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಸರಕಾರದ ಒಳ ಜಗಳದಿಂದ ಆಡಳಿತ ಹಳಿ ತಪ್ಪಿದೆ. ಈ ಗಮನವನ್ನು ಬೇರೆಡೆ ಸೆಳೆಯಲು ಪ್ರತಿದಿನ ಇಂತಹ ಮೂರ್ಖ ಕಾನೂನುಗಳನ್ನು ಸರಕಾರ ಚರ್ಚೆಗೆ ತರುತ್ತಿದೆ ಎಂದ ಅವರು, ಬೆಂಗಳೂರಿನಲ್ಲಿ 1.3 ಕೋಟಿ ಜನಸಂಖ್ಯೆ ಇದ್ದು ವಾಹನಗಳ ಸಂಖ್ಯೆಯೇ 95 ಲಕ್ಷವಿದೆ. ಈ ನಿರ್ಧಾರದಿಂದ ಹೆಚ್ಚು ತೊಂದರೆಗೆ ಒಳಗಾಗುವವರು ನಗರದಲ್ಲಿರುವ ಮಧ್ಯಮ ವರ್ಗ ಹಾಗೂ ಬಡವರು. ಇವರೆಲ್ಲ ಸ್ವಂತ ವಾಹನ ಹೊಂದಬಾರದೆ ಮುಖ್ಯಮಂತ್ರಿಗಳೆ, ಹಾಗಾದರೆ ಈ ನಗರ ಕೇವಲ ದುಡ್ಡು ಇದ್ದವರಿಗೆ ಮಾತ್ರವೇ ಎಂದು ಕಿಡಿಕಾರಿದರು.

ದುಬಾರಿ ಕಾರು ಹೊಂದಿರುವ ವ್ಯಕ್ತಿ ಹಾಗೂ ಪೈಸೆಗೆ, ಪೈಸೆ ಸೇರಿಸಿ ಸ್ವಂತ ವಾಹನ ಕನಸು ಕಾಣುವ ಬಡ ನಾಗರಿಕನೂ ಬಿಬಿಎಂಪಿ ಹಾಗೂ ಸರಕಾರದ ಕಣ್ಣಲ್ಲಿ ಒಂದೇ ಎನ್ನುವಂತಾಗಿದೆ. ನಿಮ್ಮ ಕಣ್ಣಲ್ಲಿ ಇದು ಸಮಾನತೆಯೇ ಎಂದು ಪ್ರಶ್ನಿಸಿದ ಮೋಹನ್ ದಾಸರಿ, ಸಾರ್ವಜನಿಕ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಿ, ಜನರು ಸ್ವಂತ ವಾಹನಗಳ ಅವಲಂಬನೆ ಕಡಿಮೆ ಮಾಡಬೇಕು. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡಬೇಕು. ಈಗಾಗಲೇ ನಗರದ 80 ಭಾಗಗಳಲ್ಲಿ ಇರುವ ಪಾರ್ಕಿಂಗ್ ಶುಲ್ಕ ಗೊಂದಲ ನಿವಾರಿಸಬೇಕು. ಬಿಬಿಎಂಪಿ ತಂದಿರುವ ಈ ಪ್ರಸ್ತಾವನೆಯನ್ನು ಸರಕಾರ ತಿರಸ್ಕರಿಸಬೇಕು. ಅಲ್ಲದೆ, ರಸ್ತೆ ಬದಿ ನಿಂತಿರುವ ಬಳಸದೆ ಇರುವ ಹಾಗೂ ಅನವಶ್ಯಕ ವಾಹನಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News