ಸಕಾಲ ಸೇವಾ ಆಯೋಗ ಸ್ಥಾಪನೆಗೆ ಚಿಂತನೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಡಿ.4: ಸಕಾಲ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮತ್ತು ಉತ್ತರದಾಯಿತ್ವವಾದ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಕಾಲ ಸೇವಾ ಆಯೋಗವನ್ನು ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸಕಾಲ, ಗ್ರಾಮ-ಒನ್, ಜನಸೇವಕ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ಗ್ರಾಮ ಮಟ್ಟದಿಂದಲೂ ಸಕಾಲ ಸೇವೆಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಅತಿ ಶೀಘ್ರದಲ್ಲಿ ರೂಪಿಸಲಾಗುವುದು ಎಂದರು.
ಇದಕ್ಕಾಗಿ ಸಾರ್ವಜನಿಕ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳ ಸೇವೆಯನ್ನ ಬಳಸಿಕೊಂಡು ಜನಸಾಮಾನ್ಯರಲ್ಲಿ ಈ ಯೋಜನೆ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುವುದು. ಸಕಾಲ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮತ್ತು ಜನರು ಸಕಾಲ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಮಾಡಲು ಸಕಾಲ ಯೋಜನೆಯನ್ನು ಅಭಿಯಾನದ ಮಾದರಿಯಲ್ಲಿ ಬಲಗೊಳಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ಸಕಾಲ ಮಿಷನ್ ಧ್ಯೇಯಗಳನ್ವಯ ಸಕಾಲ ಸೇವೆಗಳನ್ನು ನಿಗದಿತ ದಿನಗಳಲ್ಲಿ ನೀಡಲು ಅಧಿಕಾರಿ ಮತ್ತು ನೌಕರರು ಸಕಾಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸರಕಾರದ ಎಲ್ಲ ಇಲಾಖೆಗಳನ್ನು ಸಂವೇದನಾಶೀಲಗೊಳಿಸಲಾಗುವುದು. ಹಾಗೆಯೇ ಸರಕಾರಿ ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಿ ಸರಕಾರಿ ನೌಕರರ ಸಹಕಾರವನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.
ಸಾರ್ವಜನಿಕರಲ್ಲಿ ಜನಸ್ನೇಹಿ ಸರಕಾರ ಎಂಬ ಭಾವನೆ ಮೂಡಿಸುವಲ್ಲಿ ಸಕಾಲ ಸೇವೆಗಳ ವಿತರಣೆ ಪರಿಣಾಮಕಾರಿಯಾಗಬೇಕು ಹಾಗೂ ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸುರೇಶ್ ಕುಮಾರ್ ಸೂಚಿಸಿದರು.
ಸಕಾಲ ಸೇವೆಗಳಿಗೆ ಸಂಬಂಧಿಸಿದಂತೆ ಸಬಲವಾದ ನಾಗರಿಕ ಕೇಂದ್ರಿತ ವ್ಯವಸ್ಥೆ ರೂಪಣೆ, ಶಿಕ್ಷಣ, ಸಂಪರ್ಕ ಬೆಂಬಲ, ದೂರು ದುಮ್ಮಾನ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ವ್ಯವಸ್ಥೆ, ನಿರ್ವಹಣಾ ಮಾಹಿತಿ ವ್ಯವಸ್ಥೆ, ಜ್ಞಾನ ನಿರ್ವಹಣಾ ವ್ಯವಸ್ಥೆ, ಜಾಗೃತ ದಳ ರಚನೆ, ತಾಂತ್ರಿಕ ಘಟಕ ರಚನೆ, ಸಮನ್ವಯ ಘಟಕ, ತರಬೇತಿ ಘಟಕ, ಕಕ್ಷಿದಾರರ ಸೇವೆ, ಆಡಳಿತ ಘಟಕಗಳನ್ನು ರೂಪಿಸಲಾಗುವುದು ಎಂದರು ಅವರು ತಿಳಿಸಿದರು.
ಸಕಾಲ ಯೋಜನೆಯ ಮೂಲ ಉದ್ದೇಶ ಸಾಮಾನ್ಯ ವ್ಯಕ್ತಿಗೆ ನಾಗರಿಕ ಆಡಳಿತ ಸೇವೆಗಳ ಕುರಿತು ವಿಶ್ವಾಸಾರ್ಹತೆ ಮೂಡಬೇಕಾಗುತ್ತದೆ. ಈ ವಿಶ್ವಾಸಾರ್ಹತೆ ಮೂಡಬೇಕಾದರೆ ಯಾವುದೇ ನಾಗರಿಕನಿಗೆ ತಾನು ಪಡೆದ ಸೇವೆಗಳ ಕುರಿತಂತೆ ಸಂತಸ-ತೃಪ್ತಿಗಳ ಮಾನದಂಡವನ್ನು ನಾವು ಅಳಿಯುವಂತಾಗಬೇಕು. ಈ ಸೇವೆಗಳಿಂದ ಎಷ್ಟು ಸಮಾಧಾನ ಸಿಕ್ಕಿದೆ ಎಂಬುದಕ್ಕೆ ಪೂರಕವಾಗಿ ‘ಹ್ಯಾಪಿನೆಸ್ ಇಂಡೆಕ್ಸ್’ ಎಂಬ ಮಾನದಂಡವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ಸುರೇಶ್ ಕುಮಾರ್ ಹೇಳಿದರು.
ಎಲ್ಲ ಸರಕಾರಿ ಇಲಾಖೆಗಳಿಂದ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಸಭೆಗಳನ್ನು ಆಯೋಜಿಸುವುದು, ಸಾಮಾಜಿಕ ಜಾಲತಾಣಗಳನ್ನು ಅಭಿಪ್ರಾಯ ಸಂಗ್ರಹಿಸುವುದು ಮತ್ತು ಅಲ್ಲಿನ ಸಲಹೆ-ಸೂಚನೆಗಳನ್ನು ವ್ಯವಸ್ಥೆಯಲ್ಲಿ ಅಳವಡಿಸಿಕೊಂಡು ಗುಣಮಟ್ಟದ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜನಸೇವಕ ಪುನರಾರಂಭ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಜನಸೇವಕ ಯೋಜನೆಗಳನ್ನು ಶೀಘ್ರದಲ್ಲಿ ಪುನರಾರಂಭಗೊಳಿಸಲಾಗುವುದು. ಶೀಘ್ರದಲ್ಲೆ ಈ ಸಂಬಂಧ ಜನಸೇವಕ ಯೋಜನೆ ಜಾರಿಯಲ್ಲಿರುವ ಬೆಂಗಳೂರಿನ ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ಕ್ಷೇತ್ರದ ವಿಧಾನಸಭಾ ಸದಸ್ಯರ ಸಭೆ ಕರೆದು ಅವರ ಸಂಪೂರ್ಣ ಸಹಕಾರದೊಂದಿಗೆ ಅತಿ ಶೀಘ್ರದಲ್ಲಿ ನಾಗರಿಕರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಜನಸೇವಕ ಯೋಜನೆಗೆ ಮರು ಚಾಲನೆ ನೀಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರಕಾರವು ಮಹತ್ವಾಕಾಂಕ್ಷೆಯಿಂದ ದಾವಣಗೆರೆ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಗ್ರಾಮ-1 ಸೇವೆಗಳನ್ನು ರಾಜ್ಯದೆಲ್ಲೆಡೆ ವಿಸ್ತರಿಸಲು ಕ್ರಿಯಾ ಯೋಜನೆ ರೂಪಿಸಬೇಕೆಂದು ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಮಿಷನ್ ನಿರ್ದೇಶಕಿ ಡಾ.ಬಿ.ಆರ್.ಮಮತಾ, ಸೇವಾ ಸಿಂಧು ನಿರ್ದೇಶಕಿ ಸಿಂಧೂ, ವರಪ್ರಸಾದ ರೆಡ್ಡಿ, ಮೇಘನಾ ಮತ್ತಿತರರು ಭಾಗವಹಿಸಿದ್ದರು.