ಪ್ರಾತಿನಿಧ್ಯ ವಂಚಿತರು ಯಾರು?

Update: 2020-12-04 19:30 GMT

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ, ಮಾಧ್ಯಮದಲ್ಲಿ ಅದಕ್ಕೆ ದೊರೆತ ಪ್ರಾಮುಖ್ಯತೆ ಹಾಗೂ ಮಹಿಳೆ ಮತ್ತು ದಮನಿತ ವರ್ಗಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡುವಾಗ ಮಾಧ್ಯಮಗಳು ತೋರುವ ಅಸೂಕ್ಷ್ಮತೆಯ ಕುರಿತು ಎರಡು ತಿಂಗಳುಗಳ ಹಿಂದೆ ಸುಪ್ರೀಂಕೋರ್ಟ್‌ನ ವಕೀಲೆ ಕಿರುಬ ಮುನುಸಾಮಿ ಅವರೊಂದಿಗೆ ಚರ್ಚಿಸುತ್ತಿದ್ದ ವೇಳೆ ‘ನ್ಯೂಸ್‌ಲಾಂಡ್ರಿ’ ಮಾಧ್ಯಮ ಸಂಸ್ಥೆಯ ಸಹ ಸಂಸ್ಥಾಪಕ ಅಭಿನಂದನ್ ಸಿಖ್ರಿ ತಿಳಿಸಿದ ವಿಚಾರ ಗಮನಾರ್ಹವಾಗಿತ್ತು. ತಮ್ಮದೇ ಸಂಸ್ಥೆಯಲ್ಲಿ ಲಿಂಗ, ಜಾತಿ, ಧರ್ಮ, ಪ್ರಾದೇಶಿಕತೆ ಈ ಎಲ್ಲ ಆಯಾಮಗಳನ್ನು ಪರಿಗಣಿಸಿ ಎಲ್ಲರಿಗೂ ಸಮಾನ ಪ್ರಾತಿನಿಧ್ಯ ದೊರೆತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ಅವರು ತಿಳಿಸಿದರು. ತಮ್ಮ ಸಂಸ್ಥೆಯಲ್ಲಿ ಬಹುತ್ವವನ್ನು ಪ್ರತಿನಿಧಿಸಲು ಅಗತ್ಯವಿರುವ ಎಲ್ಲ ವರ್ಗ, ಹಿನ್ನೆಲೆಯವರಿಗೂ ಪ್ರಾತಿನಿಧ್ಯ ಕಲ್ಪಿಸಲು ಸಾಧ್ಯವಾಗಿದೆಯೇ ಎಂಬುದು ಈ ಪ್ರಕ್ರಿಯೆ ಮುಗಿದ ನಂತರ ತಿಳಿಯಲಿದೆ ಎಂದರು.

‘‘ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ದೊರೆಯುತ್ತಿಲ್ಲ, ಹಿಂದೇನೋ ಜಾತಿ ತಾರತಮ್ಯವಿತ್ತು. ಈಗ ಎಲ್ಲ ಕ್ಷೇತ್ರಗಳಲ್ಲೂ ಎಲ್ಲರಿಗೂ ಸಮಾನ ಅವಕಾಶಗಳು ಲಭ್ಯ ಇವೆ. ಮೀಸಲಾತಿಯನ್ನು ಇಂದಿಗೂ ಏಕೆ ಮುಂದುವರಿಸಬೇಕು’’ ಎಂದು ಪ್ರಶ್ನಿಸುವವರು ಆತ್ಮಾವಲೋಕನ ಮಾಡಿಕೊಳ್ಳಲು ‘‘ಪ್ರಾತಿನಿಧ್ಯ ವಂಚಿತರು ಯಾರು?’’ ಎಂಬ ಪ್ರಶ್ನೆಗೆ ಉತ್ತರ ಅರಸುವ ಪ್ರಯತ್ನ ಮಾಡಬೇಕಿದೆ. ‘ನ್ಯೂಸ್‌ಲಾಂಡ್ರಿ’ ಸಂಸ್ಥೆ ಮಾಡುತ್ತಿರುವ ರೀತಿಯಲ್ಲೇ ತಾವು ಓದುತ್ತಿರುವ, ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಜಾತಿ, ಧರ್ಮ ಮತ್ತು ಲಿಂಗದವರಿಗೂ ಪ್ರಾತಿನಿಧ್ಯ ದೊರೆತಿದೆಯೇ ಎಂಬುದನ್ನು ತೆರೆದ ಮನಸ್ಸಿನಿಂದ ಒಮ್ಮೆ ಪರಿಶೀಲಿಸಿದರೆ ಬಹುಶಃ ವಾಸ್ತವಾಂಶ ಮನದಟ್ಟಾಗಬಹುದು.

ಪ್ರಾತಿನಿಧ್ಯದ ಪ್ರಶ್ನೆಯನ್ನೇ ಹಿನ್ನೆಲೆಗೆ ಸರಿಸಿ ಸಾಮಾನ್ಯ ವರ್ಗದವರಿಗೆ ದಯಪಾಲಿಸಿರುವ ಶೇ.10 ವಿಶೇಷ ಮೀಸಲಾತಿಯಿಂದ ಸಾಧಿಸಲು ಹೊರಟಿರುವುದು ಏನನ್ನು ಎಂದು ಮನವರಿಕೆ ಮಾಡಿಕೊಳ್ಳಲು ಕೂಡ ಎಲ್ಲೆಡೆಯೂ ಪ್ರಾತಿನಿಧ್ಯದ ಪರಿಶೀಲನೆಗೆ ಚಾಲನೆ ನೀಡಬೇಕಿದೆ. ರಾಜ್ಯ ಸರಕಾರವೇ ನಡೆಸಿರುವ ಜಾತಿ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸುವುದು ಈ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆಯೇ ಸರಿ. ರಾಜಕೀಯ ಕ್ಷೇತ್ರವನ್ನೂ ಒಳಗೊಂಡಂತೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ದಕ್ಕಿಸಿಕೊಳ್ಳಲು ಯಾರಿಗೆಲ್ಲ ಇಂದಿಗೂ ಸಾಧ್ಯವಾಗಿಲ್ಲವೆಂಬುದನ್ನು ತಿಳಿಯುವ ಕುತೂಹಲ ಪ್ರತಿಭೆಗೆ ಮನ್ನಣೆ ದೊರೆಯುತ್ತಿಲ್ಲವೆಂಬ ಅಳಲು ತೋಡಿಕೊಳ್ಳುವವರಲ್ಲಿಯಾದರೂ ಇದೆಯೇ? ಪ್ರತಿಭೆ ಎಂಬ ಬಲೂನಿಗೆ ಗಾಳಿ ತುಂಬುವಲ್ಲಿ ಸಾಮಾಜಿಕ ಬಂಡವಾಳ ವಹಿಸುವ ಮಹತ್ವ, ಅನಾಯಾಸವಾಗಿ ಅದನ್ನು ದಕ್ಕಿಸಿಕೊಂಡು ಈಗಾಗಲೇ ಮೇಲೇರಿ ಅಲ್ಲೇ ದೃಢವಾಗಿ ನೆಲೆಯೂರಿದವರಿಗೆ ಅರಿವಾಗಲು ಸಾಧ್ಯವಿದೆಯೇ? ತಮಗೆ ದಕ್ಕಿದ ಸಾಮಾಜಿಕ ಬಂಡವಾಳ ಬಳಸಿಕೊಂಡು ಹೆಚ್ಚಿನ ಪ್ರಾತಿನಿಧ್ಯ ಹೊಂದಿರುವ ಜಾತಿಗಳೇ ಸರಕಾರದಿಂದ ಮತ್ತಷ್ಟು ಸವಲತ್ತು ದಕ್ಕಿಸಿಕೊಳ್ಳಲು ಜಾತಿ ನಿಗಮಗಳ ಸ್ಥಾಪನೆಗೆ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯದ ಕುರಿತು ಸ್ಪಷ್ಟ ಚಿತ್ರಣ ನೀಡುವ ಅಂಕಿಅಂಶಗಳನ್ನು ಸಾರ್ವಜನಿಕರ ಮುಂದೆ ತೆರೆದಿಡುವ ಕೆಲಸವನ್ನು ಸರಕಾರ ಮಾಡಬೇಕಿದೆ. ಶೋಷಕ ಜಾತಿಗಳ ಹಿತ ಕಾಯುವಲ್ಲಿ ಹೆಚ್ಚಿನ ಮುತುವರ್ಜಿ ತೋರುತ್ತಿರುವ ರಾಜ್ಯ ಸರಕಾರದಿಂದ ಇದನ್ನು ನಿರೀಕ್ಷಿಸಲಾದೀತೆ?

ನಮ್ಮ ಅರಿವು ಮತ್ತು ಮಾಹಿತಿಯ ಮೂಲಗಳೇ ಆಗಿರುವ ದೃಶ್ಯ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ನಿಜಕ್ಕೂ ನಮ್ಮ ಸಮಾಜವನ್ನು ಅರಿಯಲು ಅಗತ್ಯವಿರುವ ವೈವಿಧ್ಯಮಯ ಹಿನ್ನೆಲೆಯ ಮಾನವ ಸಂಪನ್ಮೂಲ ಹೊಂದಿವೆಯೇ? ಮಾಧ್ಯಮ ಸಂಸ್ಥೆಗಳಲ್ಲಿ ಕೆಲವೇ ಜಾತಿಗಳಿಗೆ ಕಣ್ಣು ಕುಕ್ಕುವಷ್ಟು ಪ್ರಾತಿನಿಧ್ಯ ದೊರೆತಿರುವಾಗ, ಅವು ಬಿತ್ತರಿಸುವ ಸುದ್ದಿಗಳಲ್ಲೂ, ಒದಗಿಸುವ ಮಾಹಿತಿಯಲ್ಲೂ ಪ್ರಾಮುಖ್ಯ ದೊರೆಯುವುದು ಯಾರ ಸಾವಿಗೆ, ಯಾರ ನೋವಿಗೆ ಎಂಬುದನ್ನು ಅರಿಯಲು ಹೆಚ್ಚೇನು ಪ್ರಯಾಸ ಪಡಬೇಕಿಲ್ಲ ಅಲ್ಲವೇ?

ಖಾಸಗಿ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಪ್ರಾತಿನಿಧ್ಯ ದೊರೆತಿದೆ ಎಂಬುದನ್ನು ಪರಿಶೀಲಿಸುವ ಗೋಜಿಗೆ ಸರಕಾರ ಹೋಗಬಾರದೆ? ಇಂತಹದೊಂದು ಪರಿಶೀಲನೆಯ ಗೈರುಹಾಜರಿಯಲ್ಲಿ ವಾಸ್ತವಾಂಶ ಅರಿಯುವುದಾದರೂ ಹೇಗೆ? ತಮ್ಮ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂದು ಭಾವಿಸುವ ಹಾಗೂ ಬಿಂಬಿಸಿಕೊಳ್ಳುವ ಖಾಸಗಿ ಸಂಸ್ಥೆಗಳು, ತಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ಹೇಗೆ ಒಟ್ಟಾರೆ ಸಮಾಜವನ್ನು ಪ್ರತಿನಿಧಿಸಲಿದೆ ಎಂಬುದನ್ನೂ ತೆರೆದಿಡಲಿ.

ಇತ್ತೀಚೆಗೆ ಎನ್‌ಪಿಆರ್‌ನ (https://www.npr.org/) ಪಾಡ್‌ಕಾಸ್ಟ್‌ನಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಫ್ಟ್‌ವೇರ್ ಇಂಜಿನಿಯರ್‌ಗಳು ತಮ್ಮ ಸಹೋದ್ಯೋಗಿಗಳ ಜಾತಿ ತಿಳಿಯಲು ಅನುಸರಿಸುವ ನಾನಾ ತಂತ್ರಗಳು ಮತ್ತು ದಮನಿತ ಜಾತಿಗಳ ಸಹೋದ್ಯೋಗಿಗಳು ಉದ್ಯೋಗ ಕ್ಷೇತ್ರದಲ್ಲಿ ಏಳಿಗೆ ಹೊಂದುವುದನ್ನು ತಡೆಯಲು ಮಾಡುವ ಕಸರತ್ತುಗಳ ಕುರಿತು ತಮಿಳುನಾಡು ಮೂಲದ ದಮನಿತ ಸಮುದಾಯದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಜಾತಿ ಎಲ್ಲಿದೆ ಎನ್ನುವ ಹುಂಬತನ ತೋರುವವರು, ಒಮ್ಮೆ ಭಾರತೀಯ ಜಾತಿ ಬೇರುಗಳು ವಿದೇಶಿ ನೆಲದಲ್ಲೂ ಅದೆಷ್ಟು ಆಳಕ್ಕೆ ಚಾಚಿಕೊಂಡಿವೆ ಎಂಬುದನ್ನು ಅರಿಯಲು ಆ ಪಾಡ್‌ಕಾಸ್ಟ್ ಆಲಿಸುವುದು ಸೂಕ್ತ.

ಸಂವಿಧಾನ ಅಳವಡಿಸಿಕೊಂಡು 70 ವರ್ಷಗಳೇ ಉರುಳಿದರೂ ಇಂದಿಗೂ ದಲಿತರೊಬ್ಬರು ದೇಶದ ಪ್ರಧಾನಿಯಾಗುವುದು, ನಮ್ಮ ರಾಜ್ಯದ ಮುಖ್ಯಮಂತ್ರಿಯಾಗುವುದು ಗಗನಕುಸುಮವಾಗಿರುವ ಹೊತ್ತಿನಲ್ಲಿ ಪ್ರಾತಿನಿಧ್ಯದ ಪರಿಶೀಲನೆ ನಡೆದರೆ ಯಾರ ಬುಡ ಅಲುಗಾಡಲಿದೆ ಎಂಬುವುದು ಮೇಲುನೋಟಕ್ಕೆ ಅರಿವಾಗಬಹುದಾದ ಸಂಗತಿ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹೀಗೆ ಎಲ್ಲೆಡೆಯೂ ಇಂದಿಗೂ ಅಗತ್ಯಕ್ಕಿಂತ ಹೆಚ್ಚೇ ಪ್ರಾತಿನಿಧ್ಯ ದಕ್ಕಿಸಿಕೊಂಡೂ ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ದೊರೆಯುತ್ತಿಲ್ಲವೆಂಬ ಅಳಲನ್ನು ಮುನ್ನೆಲೆಗೆ ತರುವವರ ವಿರುದ್ಧ ಹೋರಾಡಲು ಅಳಿದುಳಿದ ಅವಕಾಶಗಳಿಗಾಗಿ ಸೆಣಸಾಡುತ್ತಿರುವ ಪ್ರಾತಿನಿಧ್ಯ ವಂಚಿತ ಸಮುದಾಯಗಳೆಲ್ಲವೂ ಎಂದಾದರೂ ಒಗ್ಗೂಡಬಹುದೇ?

ಶತಶತಮಾನಗಳಿಂದ ಪ್ರಾತಿನಿಧ್ಯ ವಂಚಿತರಾಗಿರುವವರು ಯಾರು? ಪ್ರತಿಭೆಯ ಗುರಾಣಿ ಹಿಡಿದು ಪ್ರಾತಿನಿಧ್ಯದ ಪ್ರಶ್ನೆಯನ್ನೇ ಹಿನ್ನೆಲೆಗೆ ಸರಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಕಣ್ಣೆದುರೇ ಇದೆ. ಪ್ರಭುತ್ವದ ಕಣ್ಣು ತೆರೆಯಬೇಕಷ್ಟೆ. ಶೋಷಕರ ಏಳಿಗೆಯ ಕಡೆಗೇ ವಾಲಿರುವ ಪ್ರಭುತ್ವದ ಕಣ್ಣುಗಳನ್ನು ಇತ್ತ ಕಡೆಗೂ ತಿರುಗಿಸಲು ಬೇಕಿರುವ ಒತ್ತಡ ರೂಪಿಸಲು ದಮನಿತರು ಒಗ್ಗೂಡಬಲ್ಲರೇ?

ಇ-ಮೇಲ್: hksharu@gmail.com

Writer - ಎಚ್. ಕೆ. ಶರತ್, ಹಾಸನ

contributor

Editor - ಎಚ್. ಕೆ. ಶರತ್, ಹಾಸನ

contributor

Similar News