×
Ad

ಬ್ಯೂಟಿಷಿಯನ್ ತರಬೇತಿ ಪಡೆದ 31 ಮಹಿಳೆಯರಿಗೆ ಅರ್ಹತಾ ಪತ್ರ ವಿತರಿಸಿದ ಡಿಸಿಎಂ

Update: 2020-12-05 23:14 IST

ಬೆಂಗಳೂರು, ಡಿ.5: ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಹಮ್ಮಿಕೊಂಡಿದ್ದ ಬ್ಯೂಟಿಷಿಯನ್ ತರಬೇತಿಯಲ್ಲಿ ಪಾಲ್ಗೊಂಡು ಕುಶಲತೆಯನ್ನು ಸಾಧಿಸಿದ ಮಹಿಳೆಯರಿಗೆ ಜೀವನೋಪಾಯ ಇಲಾಖೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅರ್ಹತಾ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ 31 ಮಹಿಳೆಯರೆಲ್ಲರೂ ಪ್ರಸಾದನ (ಬ್ಯೂಟಿಷಿಯನ್) ವಿಭಾಗದಲ್ಲಿ ತರಬೇತಿ ಪಡೆದಿದ್ದು, ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಅವರಿಂದ ಅರ್ಹತೆಯ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಯಾವುದೇ ವೃತ್ತಿಯನ್ನು ಕೈಗೊಂಡರೂ ಕುಶಲತೆ ಎನ್ನುವುದು ಬಹಳ ಮುಖ್ಯ. ಕೋವಿಡ್ ನಂತರದ ಕಾಲದಲ್ಲಿ ಯಾರಿಗೇ ಆಗಲಿ ಕುಶಲತೆ ಇಲ್ಲದಿದ್ದರೆ ಕೆಲಸ ಸಿಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸರಕಾರ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಬ್ಯೂಟಿಷಿಯನ್ ವೃತ್ತಿಗೆ ಬಹಳಷ್ಟು ಬೇಡಿಕೆ ಇದ್ದು, ಅದನ್ನು ಅತ್ಯಂತ ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುವಂತೆ ಮಹಿಳೆಯರಿಗೆ ಸಲಹೆ ಮಾಡಿದ ಡಿಸಿಎಂ, ಕೋವಿಡ್ ಕಾರಣದಿಂದಾಗಿ ಎದುರಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಇಂಥ ವೃತ್ತಿಪರ ತರಬೇತಿಗಳು ಹೆಚ್ಚು ಉಪಯೋಗವಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ನಗರ ಜೀವನೋಪಾಯ ಇಲಾಖೆಯ ಅಧಿಕಾರಿಗಳು, ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News