×
Ad

ವಕೀಲರ ಪರಿಷತ್‍ನ ಮುಸ್ಲಿಂ ಸದಸ್ಯರ ಕೋಟಾಗೆ ಚುನಾವಣೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-12-06 20:00 IST

ಬೆಂಗಳೂರು, ಡಿ. 6: ರಾಜ್ಯ ವಕ್ಫ್ ಮಂಡಳಿಗೆ ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಮುಸ್ಲಿಂ ಸದಸ್ಯರ ಕೋಟಾಗೆ ಚುನಾವಣೆ ನಡೆಸಲು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ, ಚುನಾವಣಾ ನೋಂದಣಾಧಿಕಾರಿಯೂ ಆಗಿರುವ ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತರು, ರಾಜ್ಯ ವಕ್ಫ್ ಮಂಡಳಿಯ ಸಿಇಒಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.23ಕ್ಕೆ ಮುಂದೂಡಿತು.

ಸರಕಾರ ಹೊರಡಿಸಿರುವ ಅಧಿಸೂಚನೆಯಂತೆ ರಾಜ್ಯ ವಕ್ಫ್ ಮಂಡಳಿಗೆ ವಕೀಲರ ಪರಿಷತ್ತಿನ ಮುಸ್ಲಿಂ ಸದಸ್ಯರ ಕೋಟಾಗೆ ಚುನಾವಣೆ ನಡೆದರೆ, ಅದು ಹೈಕೋರ್ಟ್ ನೀಡುವ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ಪೀಠ ಸ್ಪಷ್ಟಪಡಿಸಿತು.

ರಾಜ್ಯ ವಕೀಲರ ಪರಿಷತ್ತಿನಲ್ಲಿ ಚುನಾಯಿತ ಮುಸ್ಲಿಂ ಸದಸ್ಯರು ಇಲ್ಲದಿದ್ದರೆ ಮಾಜಿ ಸದಸ್ಯರನ್ನು ಪರಿಗಣಿಸಬಹುದು. ಆದರೆ, ಹಾಲಿ ವಕೀಲರ ಪರಿಷತ್ತಿನಲ್ಲಿ ಒಬ್ಬರು ಮುಸ್ಲಿಂ ಸದಸ್ಯರಿದ್ದು, ನಿಯಮದಂತೆ ಅವರು ವಕ್ಫ್ ಮಂಡಳಿಗೆ ಚುನಾಯಿತರಾಗಿದ್ದಾರೆ. ಹಾಗಾಗಿ ವಕೀಲರ ಪರಿಷತ್ತಿನ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News