ರೈತರು ಇಂಗ್ಲಿಷ್ ಮಾತನಾಡಬಾರದೇ?

Update: 2020-12-07 07:00 GMT

ಪ್ರಪ್ರಥಮ ಬಾರಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಗಾಂಧಿಯನ್ನು ಭೇಟಿಯಾದಾಗ, ಅಂಬೇಡ್ಕರ್ ಅವರು ದಲಿತ ಸಮುದಾಯಕ್ಕೆ ಸೇರಿದವರೆನ್ನುವುದು ಗೊತ್ತೇ ಇರಲಿಲ್ಲವಂತೆ. ಅವರ ಧಿರಿಸು ಮಾತುಗಳನ್ನು ನೋಡಿ, ಯಾವುದೋ ಮೇಲ್ಜಾತಿಯ ಸಮುದಾಯಕ್ಕೆ ಸೇರಿರಬೇಕು ಎಂದು ತಿಳಿದುಕೊಂಡಿದ್ದರಂತೆ. ಅವರ ಜಾತಿ ಗೊತ್ತಾದಾಗ ಒಂದು ಕ್ಷಣ ಆವಕ್ಕಾಗಿದ್ದರಂತೆ. ಬಹುಶಃ ತನ್ನ ಸಮುದಾಯ ಪ್ರತಿನಿಧಿಸುವ ಧಿರಿಸು, ಭಾಷೆ, ಬದುಕುವ ರೀತಿ ಎಲ್ಲವನ್ನೂ ಅಂಬೇಡ್ಕರ್ ಬದಲಿಸಿಕೊಂಡದ್ದು ಈ ಕಾರಣಕ್ಕಾಗಿ. ಈ ದೇಶದಲ್ಲಿ, ಇಂದಿಗೂ ಮಲ ಹೊರುವ ಪದ್ಧತಿ ಯಾಕೆ ಜಾರಿಯಲ್ಲಿದೆ ಎಂದರೆ ನಾವು ಮಲ ಹೊರುವುದಕ್ಕಾಗಿಯೇ ಒಂದು ಜಾತಿಯನ್ನು ಸೃಷ್ಟಿಸಿಕೊಂಡಿದ್ದೇವೆ. ಅವರು ಅದಕ್ಕಾಗಿಯೇ ಇರುವವರು ಎನ್ನುವ ಮನಸ್ಥಿತಿ ನಮಗೆ ತಿಳಿಯದಂತೆೆ ಇನ್ನೂ ನಮ್ಮನ್ನು ಆಳುತ್ತಿದೆ. ಇದನ್ನು ಮೀರುವುದಕ್ಕಾಗಿಯೇ ಅಂಬೇಡ್ಕರ್ ಸೂಟು ಬೂಟುಗಳ ಮೂಲಕವೇ ತಮ್ಮನ್ನು ಗುರುತಿಸಿಕೊಂಡರು. ಹಾಗೆಯೇ ಈ ಮನಸ್ಥಿತಿಯನ್ನು ಮೀರುವುದಕ್ಕಾಗಿ ಗಾಂಧಿ, ತನ್ನ ಸೂಟು ಬೂಟುಗಳನ್ನು ಕಳಜಿ ತುಂಡು ಬಟ್ಟೆಯನ್ನು ಧರಿಸಿದರು. ಇಂದಿಗೂ ಮೇಲ್ಜಾತಿ ಶೂದ್ರರಲ್ಲಿ, ದಲಿತರು ತಮ್ಮಂತೆಯೇ ಗೌರವ, ಘನತೆಯಿಂದ ಬದುಕುವುದು ತಮಗೆ ಮಾಡುವ ಅವಮಾನ ಎಂದೇ ಪರಿಗಣಿಸುತ್ತಾರೆ. ಆದುದರಿಂದಲೇ, ದಲಿತರು ಮದುವೆಗೆ ಕುದುರೆ ಬಳಸಿದರೆ ಅಥವಾ ಮೇಲ್ಜಾ ತಿಯ ಮುಂದೆ ಬೈಕ್‌ನಲ್ಲಿ ಓಡಾಡಿದರೆ ಅವರ ಮೇಲೆ ಹಲ್ಲೆಗಳು ನಡೆಯುತ್ತವೆ. ನಾರಾಯಣಗುರುಗಳು ಸಂಸ್ಕೃತದಲ್ಲಿ ಬರೆದಿರುವುದು ಸಂಸ್ಕೃತದ ಮೇಲಿನ ಪ್ರೀತಿಯಿಂದಲ್ಲ, ಶೂದ್ರರೂ ಸಂಸ್ಕೃತವನ್ನು ಕಲಿಯಬಲ್ಲರು ಎನ್ನುವುದನ್ನು ಮೇಲ್ಜಾತಿಗಳಿಗೆ ತೋರಿಸುವುದಕ್ಕಾಗಿ. ಕುವೆಂಪು ಮಹಾಕಾವ್ಯ ಬರೆದಿರುವುದು ಮೇಲ್‌ಜಾತಿಯ ಕವಿಗಳ ಮೇಲರಿಮೆಗಳನ್ನು ಮುರಿಯುವ ಉದ್ದೇಶದಿಂದಲೇ ಆಗಿದೆ.

ಮೇಲಿನದೆಲ್ಲವೂ ಜಾತಿ, ಧರ್ಮಗಳಿಗೆ ಸಂಬಂಧಿಸಿದವುಗಳು. ಆದರೆ ಈ ದೇಶದಲ್ಲಿ ರೈತರ ಕುರಿತಂತೆಯೂ ಇಂತಹದೇ ಮನಸ್ಥಿತಿ ಕೆಲಸ ಮಾಡುತ್ತಿರುವುದು ಇತ್ತೀಚಿನ ದಿಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಬೆಳಕಿಗೆ ಬಂತು. ರೈತರ ಪ್ರತಿಭಟನೆಗಳನ್ನು ದಮನಿಸಲು ಕೇಂದ್ರ ಸರಕಾರ ಮತ್ತು ಸಂಘಪರಿವಾರ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಸರಕಾರ ಒಂದೆಡೆ ಪೊಲೀಸ್ ಬಲವನ್ನು ಪ್ರಯೋಗಿಸಿತು. ಕೊರೋನ ಸೋಂಕು ಹರಡುವ ಭೀತಿಯನ್ನು ಹರಡಿತು. ರಸ್ತೆಯನ್ನೇ ಅಗೆದು ಅವರನ್ನು ತಡೆಯಿತು. ಆದರೆ ಎಲ್ಲ ಬಲ ಪ್ರಯೋಗಗಳನ್ನು ಮೀರಿ ರೈತರು ದಿಲ್ಲಿ ತಲುಪಿದಾಗ, ಪ್ರತಿಭಟನಾಕಾರರು ರೈತರೇ ಅಲ್ಲ ಎಂದು ಹೇಳಿತು. ಮೊದಲು ಅವರನ್ನು ‘ಕಾಂಗ್ರೆಸ್‌ನ ಪ್ರತಿನಿಧಿಗಳು’ ಎಂದು ಆರೋಪಿಸಿತು. ಆ ಆರೋಪ ಪರಿಣಾಮ ಬೀರದೆ ಇದ್ದಾಗ ಸಿಖ್ಖರ ಗಡ್ಡ, ಪೇಟವನ್ನು ತೋರಿಸಿ ‘ಪ್ರತಿಭಟನಾಕಾರರು ಖಾಲಿಸ್ತಾನ್ ಉಗ್ರರು’ ಎಂದು ಹೇಳಿತು. ಇದೇ ಸಂದರ್ಭದಲ್ಲಿ ನೆರೆದ ಪ್ರತಿಭಟನಾಕಾರರನ್ನು ರೈತರಲ್ಲ ಎಂದು ಸಾಬೀತು ಪಡಿಸಲು ಕೆಲವು ಮಾಧ್ಯಮಗಳೂ ಸಾಕಷ್ಟು ಪ್ರಯತ್ನಿಸಿದವು. ರೈತರಲ್ಲ ಎನ್ನುವುದಕ್ಕೆ ಈ ಮಾಧ್ಯಮಗಳು ನೀಡಿದ ಕಾರಣ, ಪ್ರತಿಭಟನಾಕಾರರಲ್ಲಿ ಹಲವರು ಇಂಗ್ಲಿಷ್ ಮಾತನಾಡುತ್ತಿದ್ದರು ಮತ್ತು ಹಲವರು ಜೀನ್ಸ್ ಪ್ಯಾಂಟ್ ಧರಿಸಿದ್ದರ ು. ಕೆಲವರಲ್ಲಿ ವಾಹನಗಳಿದ್ದವು. ‘‘ನೀವು ರೈತರಾಗಿದ್ದರೆ ಇಂಗ್ಲಿಷ್ ಹೇಗೆ ಮಾತನಾಡುತ್ತಿದ್ದೀರಿ?’ ಎಂಬ ಮೂರ್ಖ ಪ್ರಶ್ನೆಯೊಂದನ್ನು ಮಾಧ್ಯಮ ಪ್ರತಿನಿಧಿಯೊಬ್ಬ ಪ್ರತಿಭಟನಾಕಾರರಲ್ಲಿ ಕೇಳುತ್ತಿದ್ದ. ಒಬ್ಬ ರೈತ ಈ ದೇಶದಲ್ಲಿ ಯಾಕೆ ಜೀನ್ಸ್ ಪ್ಯಾಂಟ್ ಧರಿಸಬಾರದು? ವಾಹನವನ್ನು ಹೊಂದಬಾರದು? ಅಥವಾ ಇಂಗ್ಲಿಷ್ ಮಾತನಾಡಬಾರದು? ಯಾಕೆಂದರೆ ಆ ಎಲ್ಲಾ ಹಕ್ಕುಗಳು ಇರುವುದು ಐಟಿ, ಬಿಟಿಯಲ್ಲಿರುವ ಜನರಿಗೆ ಅಥವಾ ಈ ದೇಶದ ಕಾರ್ಪೊರೇಟ್ ಧಣಿಗಳು ಮತ್ತು ಅವರ ಹಿಂಬಾಲಕರಿಗೆ. ಸರಕಾರವೂ ಇಂತಹದೇ ಮನಸ್ಥಿತಿಯನ್ನು ಹೊಂದಿರುವುದರಿಂದಲೇ ಈ ದೇಶದ ರೈತರ ಬದುಕುವ ಹಕ್ಕನ್ನೇ ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಒಪ್ಪಿಸುವ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ.

ನಾಲ್ಕು ದಶಕಗಳ ಹಿಂದೆ ಪ್ರಾಥಮಿಕ ಶಾಲೆಗಳ ಪಠ್ಯದಲ್ಲಿ ‘ಅನ್ನದಾತ’ ಎನ್ನುವ ಪದ್ಯವೊಂದಿತ್ತು. ಅಲ್ಲಿ ರೈತನ ದಯನೀಯ ಸ್ಥಿತಿಯನ್ನು ವರ್ಣಿಸಲಾಗಿತ್ತು. ಇಂದಿಗೂ ರೈತ ಎಂದಾಕ್ಷಣ ಎಲುಬಿನ ಹಂದರವೊಂದು ನೇಗಿಲಿನಿಂದ ನೆಲವನ್ನು ಉಳುವ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ರೈತನೆಂದರೆ ಶೋಷಣೆಗಾಗಿಯೇ ಇರುವವನು ಎನ್ನುವ ಮನಸ್ಥಿತಿ ನಮ್ಮಲ್ಲಿ ಆಳವಾಗಿ ಬೇರೂರಿದೆ. ಹಾಗೆಯೇ ಆತನನ್ನು ಶೋಷಿಸುವುದು ನಮ್ಮ ಹಕ್ಕು ಎನ್ನುವುದನ್ನು ಮಧ್ಯವರ್ತಿಗಳು, ಮಾರುಕಟ್ಟೆ ದಲ್ಲಾಳಿಗಳು, ರಾಜಕಾರಣಿಗಳು ಬಲವಾಗಿ ನಂಬಿದ್ದಾರೆ. ಈ ಕಾರಣದಿಂದಲೇ, ಬೆಳೆಯನ್ನು ರೈತ ಬೆಳೆದರೆ ಅದರಿಂದ ಕಾರು ಬಂಗಲೆಗಳನ್ನು ಮಾಡಿಕೊಳ್ಳುತ್ತಾ ಬರುತ್ತಿರುವುದು ಇತರರು. ಬದುಕಿಗೆ ಯಾವ ರೀತಿಯಲ್ಲೂ ಅನಿವಾರ್ಯವಲ್ಲದ ಮದ್ಯ, ಸಿಗರೇಟುಗಳನ್ನು ಸಿದ್ಧಪಡಿಸುವವನು ಕೋಟ್ಯಂತರ ರೂಪಾಯಿ ಬಾಚಬಲ್ಲನಾದರೆ, ಪ್ರತಿದಿನವೂ ಮನುಷ್ಯ ಬದುಕುವುದಕ್ಕೆ ಅನಿವಾರ್ಯವಾಗಿರುವ ಆಹಾರ ಪದಾರ್ಥಗಳನ್ನು ಬೆಳೆಯುವ ಕೃಷಿಕ ಯಾಕೆ ಕೋಟ್ಯಧಿಪತಿಯಾಗಲು ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ಕೇಳುವ ಸಮಯ ಬಂದಿದೆ. ರೈತನ ಬಳಿ ವಾಹನಗಳಿದ್ದರೆ, ಅವನು ಇಂಗ್ಲಿಷ್ ಮಾತನಾಡುತ್ತಿದ್ದರೆ, ಸೂಟುಬೂಟುಗಳನ್ನು ಧರಿಸಿದ್ದರೆ ಅದು ನಮಗೆ ಯಾಕೆ ಹೆಮ್ಮೆಯ ವಿಷಯವಾಗುವುದಿಲ್ಲ? ಕೃಷಿಯ ಬಗ್ಗೆ ನಮಗಿರುವ ಕೀಳರಿಮೆಯೇ ಇದಕ್ಕೆ ಮುಖ್ಯ ಕಾರಣ.

 ಒಂದಿಷ್ಟು ಆರ್ಥಿಕವಾಗಿ ಗಟ್ಟಿಯಿರುವ ರೈತರ ಮಕ್ಕಳು ಈ ಕಾರಣಕ್ಕಾಗಿಯೇ ಕೃಷಿ ಕ್ಷೇತ್ರದಿಂದ ದೂರ ಉಳಿಯುತ್ತಿದ್ದಾರೆ. ಐಟಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರಗಳನ್ನು ಆರಿಸುತ್ತಾರೆ ಅಥವಾ ನಗರ ಬದುಕಿಗೆ ವಾಲುತ್ತಾರೆ. ಕೃಷಿಯನ್ನೇ ನೆಚ್ಚಿಕೊಂಡ ಯುವಕರಿಗೆ ಸೂಕ್ತ ವಧುಗಳು ಸಿಗುವುದಿಲ್ಲ ಎನ್ನುವ ಆರೋಪಗಳೂ ಕೇಳಿ ಬರುತ್ತವೆ. ‘ಏನು ಕೆಲಸ ಮಾಡುತ್ತೀರಿ?’ ಎಂಬ ಪ್ರಶ್ನೆಗೆ ‘ಕೃಷಿ’ ಎಂದು ಉತ್ತರಿಸಿದಾಕ್ಷಣ ಪ್ರಶ್ನೆ ಕೇಳಿದವನ ಮುಖ ಮಂಕಾಗುತ್ತದೆ. ಅತ್ಯುನ್ನತ ಶಿಕ್ಷಣವನ್ನು ಮುಗಿಸಿ, ಬಳಿಕ ಕೃಷಿಯನ್ನು ಆಯ್ದುಕೊಂಡರೆ ಆತನ ಹಣೆಗೆೆ ‘ನಿರುದ್ಯೋಗಿ’ ಎಂಬ ಹಚ್ಚೆಯನ್ನು ಹಾಕಲಾಗುತ್ತದೆ. ‘ಇಷ್ಟೆಲ್ಲ ಕಲಿತು ಈ ಕೆಲಸ ಮಾಡುವುದೋ?’ ಅಥವಾ ‘ಈ ಕೆಲಸ ಮಾಡುವುದಕ್ಕೆ ಅಷ್ಟೆಲ್ಲ ಯಾಕೆ ಕಲಿಯಬೇಕಾಗಿತ್ತು?’ ಎಂಬ ಪ್ರಶ್ನೆಯನ್ನು ಆತನಿಗೆ ಪದೇ ಪದೇ ಕೇಳಲಾಗುತ್ತದೆ. ಇದೇ ಸಂದರ್ಭದಲ್ಲಿ ಇಂಜಿನಿಯರ್, ವೈದ್ಯಕೀಯ ಕೆಲಸಗಳನ್ನು ಬಿಟ್ಟು ಕೃಷಿಗೆ ತಮ್ಮನ್ನು ಒಪ್ಪಿಸಿ ಜೀವನದಲ್ಲಿ ಗೆದ್ದ ಎಷ್ಟೋ ಯುವಕರು ನಮ್ಮ ಮುಂದೆ ಉದಾಹರಣೆಯಾಗಿದ್ದಾರೆ.

ವಿವಿಧ ಬೆಳೆಗಳನ್ನು ಬೆಳೆದು ಕೋಟ್ಯಂತರ ರೂಪಾಯಿ ಸಂಪಾದಿಸಿದ ಯುವಕರ ವರದಿಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಆದರೂ ಕೃಷಿಯ ಕುರಿತಂತೆ ನಮ್ಮ ಪೂರ್ವಾಗ್ರಹ ಇಲ್ಲವಾಗಿಲ್ಲ. ಮೊದಲ ಹಸಿರುಕ್ರಾಂತಿಯಲ್ಲಿ ಪಂಜಾಬ್‌ನ ಕೊಡುಗೆ ಬಹುದೊಡ್ಡದು. ಪರಂಪರಾಗತವಾಗಿ ಅವರು ಕೃಷಿಯನ್ನೇ ನೆಚ್ಚಿಕೊಂಡವರು. ವಿದ್ಯಾವಂತರೂ ಕೃಷಿಯನ್ನು ಅವಲಂಬಿಸುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಕೃಷಿಯನ್ನು ಹೊರತು ಪಡಿಸಿದರೆ ಅವರು ಆದ್ಯತೆ ನೀಡುವುದು ಸೇನೆಗೆ. ‘ಜೈ ಜವಾನ್-ಜೈಕಿಸಾನ್’ ಎನ್ನುವ ಘೋಷಣೆ ಅವರ ಬದುಕಿನಲ್ಲಿ ಅವಿನಾಭಾವವಾಗಿ ಬೆರೆತಿದೆ. ಪಂಜಾಬ್‌ನ ಕೃಷಿಕರು ಆರ್ಥಿಕವಾಗಿ ಸಬಲರಾಗಿರುವ ಕಾರಣ, ವಿದ್ಯಾವಂತರಾಗಿರುವ ಕಾರಣ ಸರಕಾರದ ಕೃಷಿ ನೀತಿಯ ವಿರುದ್ಧ ಬಂಡೆದ್ದಿದ್ದಾರೆ. ಇಂಗ್ಲಿಷ್ ಮಾತನಾಡುತ್ತಿರುವ ಕಾರಣದಿಂದಲೇ ಸರಕಾರದ ಕೃಷಿ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಕೃಷಿಕರು ಆಳುವವರ ಗುಲಾಮರಲ್ಲ ಎನ್ನುವುದನ್ನು ರಾಜಧಾನಿಗೆ ನುಗ್ಗಿ ಸರಕಾರಕ್ಕೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಕೃಷಿಕರ ಕುರಿತಂತೆ ದೇಶದ ಮನಸ್ಥಿತಿಯನ್ನೇ ಅವರು ಬದಲಾಯಿಸಲು ಹೊರಟಿದ್ದಾರೆ. ಅವರ ಗೆಲುವಿಗೆ ಹೆಗಲು ಜೋಡಿಸುವುದು ಅನ್ನ ಉಣ್ಣುವ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಅವರನ್ನು ಅನುಮಾನಿಸುವುದು ನಾವು ಉಣ್ಣುವ ಅನ್ನಕ್ಕೆ ಮಾಡುವ ಅವಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News