ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆಗೆ ಪಟ್ಟು: ಆಡಳಿತ-ವಿರೋಧ ಪಕ್ಷಗಳ ನಡುವೆ ವಾಗ್ವಾದ

Update: 2020-12-07 13:52 GMT

ಬೆಂಗಳೂರು, ಡಿ.7: ನೆರೆ ಹಾವಳಿಯಿಂದ ರಾಜ್ಯದಲ್ಲಿ ಸಂಭವಿಸಿದ ಸಾವು ನೋವುಗಳ ಕುರಿತು ಸದನದಲ್ಲಿ ನಿಯಮ 59ರಡಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರುವ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಗೂ ಆಡಳಿತ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ನಡುವೆ ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು.

ಸೋಮವಾರ ಸಂತಾಪ ಸೂಚನೆಯ ನಂತರ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ 55 ಲಕ್ಷ ಎಕರೆ ಬೆಳೆ ನಾಶವಾಗಿದೆ. 50 ಸಾವಿರ ಮನೆಗಳು ಹಾಳಾಗಿವೆ. 90 ಕ್ಕೂ ಹೆಚ್ಚು ಮಂದಿ ಹಾಗೂ 2 ಸಾವಿರಕ್ಕೂ ಹೆಚ್ಚು ಜಾನುವಾರಗಳು ಪ್ರಾಣ ಕಳೆದುಕೊಂಡಿವೆ. ಆದರೂ ಸರಕಾರ ಜನತೆಯ ನೆರವಿಗೆ ಧಾವಿಸಿಲ್ಲವೆಂದು ಆರೋಪಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ, ನಿಲುವಳಿ ಸೂಚನೆಯನ್ನು ಶೂನ್ಯ ವೇಳೆ ಇಲ್ಲವೇ ಪ್ರಶ್ನೋತ್ತರ ವೇಳೆಯ ನಂತರ ಪ್ರಸ್ತಾಪಿಸಬೇಕೆ ವಿನಃ ಈಗಲ್ಲ. ಇದಕ್ಕೆ ಸಭಾಪತಿಗಳು ಅವಕಾಶ ಮಾಡಿಕೊಡಬಾರದೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಆರ್.ಪಾಟೀಲ್, ನಿಲುವಳಿಯನ್ನು ಪ್ರಸ್ತಾಪಿಸಲು ಅವಕಾಶವಿದೆ. ಆ ನಂತರ ಅದಕ್ಕೆ ಅವಕಾಶ ಕೊಡುವುದು ಬಿಡುವುಡು ಸಭಾಪತಿಗಳ ವಿವೇಚನೆಗೆ ಬಿಟ್ಟಿದೆಂದು ತಿಳಿಸಿದರು.

ರಾಜ್ಯದಲ್ಲಿ 22 ಜಿಲ್ಲೆಗಳ 180 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ. ಕಳೆದ ಬಾರಿಯೂ ಕಂಡುಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತತ್ತಾಗಿ ಸುಮಾರು 35 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಕಳೆದ ಬಾರಿಯ ನೆರೆ ಪರಿಹಾರವೇ ಬಹುತೇಕ ಜನತೆಗೆ ತಲುಪಿಲ್ಲ. ಈ ವರ್ಷದ ಅತಿವೃಷ್ಟಿಗೆ ಸಂಬಂಧಿಸಿದಂತೆ ಸರಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನಿಯಮ 59ರಡಿ ನಿಲುವಳಿ ಸೂಚನೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.

ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಗಳನ್ನು ತಳ್ಳಿಹಾಕಿದ ಶ್ರೀನಿವಾಸ್ ಪೂಜಾರಿ, ರಾಜ್ಯದ ಇತಿಹಾಸದಲ್ಲಿಯೇ ನೆರೆಪರಿಹಾರಕ್ಕೆ ಸಂಬಂಧಿಸಿದಂತೆ ಯಾವ ಸರಕಾರವೂ ಮಾಡದಂತಹ ಪರಿಹಾರ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಮಾಡಿದೆ ಎಂದು ಸಮರ್ಥಿಸಿಕೊಂಡರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಹೆಚ್ಚಾಗುತ್ತಿದ್ದಂತೆ, ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೊಡುವುದಾಗಿ ಸೂಚಿಸಿ ಸಭಾಪತಿಗಳು ಪ್ರಶ್ನೋತ್ತರಕ್ಕೆ ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News