ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೂ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಡಿಕೆಶಿ

Update: 2020-12-07 14:25 GMT

ಬೆಂಗಳೂರು, ಡಿ.7: ದೇಶದ ಆರ್ಥಿಕತೆಯ ಬೆನ್ನೆಲುಬು ರೈತ. ಕೇಂದ್ರ ಸರಕಾರ ಉದ್ದಿಮೆದಾರರ ಹಿತಕ್ಕಾಗಿ ರೈತರಿಗೆ ಮಾರಕವಾದ ಕಾನೂನು ತಂದಿದೆ. ಹೀಗಾಗಿ. ರೈತರು ಕರೆ ನೀಡಿರುವ ಬಂದ್‍ಗೆ ಕಾಂಗ್ರೆಸ್ ಪಕ್ಷ ಕೈಜೋಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿತ್ತು. ರಾಜ್ಯದಲ್ಲಿ ಈ ಅಭಿಯಾನಕ್ಕೆ ಸುಮಾರು 8.80 ಲಕ್ಷ ಜನ ರೈತರು ಸಹಿ ಹಾಕಿ ಭಾಗವಹಿಸಿದ್ದಾರೆ. ಅವರ ಸಹಿ ಪತ್ರಗಳನ್ನು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರಿಗೆ ನೀಡಲಿದ್ದಾರೆ. ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೂ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದರು. 

ಈ ಮಸೂದೆಗಳ ವಿರುದ್ಧ ರೈತರ ಭಾವನೆಯನ್ನು ರಾಷ್ಟ್ರಪತಿಗಳಿಗೆ ತಿಳಿಸುವ ಪ್ರಯತ್ನ ಇದಾಗಿದ್ದು, ನಾವು ಈ ಸಹಿ ಪತ್ರಗಳನ್ನು ಎಐಸಿಸಿಗೆ ಕಳುಹಿಸಿಕೊಡುತ್ತೇವೆ. ಅಲ್ಲಿಂದ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು. ದೇಶದ ಆರ್ಥಿಕತೆಯ ಬೆನ್ನೆಲುಬು ರೈತ. ಇಂದು ಕೇಂದ್ರ ಸರಕಾರದ ಕಾನೂನುಗಳು ಉದ್ದಿಮೆದಾರರ ಹಿತಕ್ಕಾಗಿ ರೈತರಿಗೆ ಮಾರಕವಾದ ಕಾನೂನು ತಂದಿದೆ. ಹೀಗಾಗಿ ನಾವು ರೈತರ ಪರವಾಗಿ ನಿಲ್ಲುತ್ತೇವೆ ಎಂದರು.

ನಾವು ಮಂಗಳವಾರ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತೇವೆ. ನಾವು ಬೀದಿಗಿಳಿದು ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಇದ್ದು, ನಾವು ಬಹಳ ಶಾಂತಿಯುತವಾಗಿ ಯಾರಿಗೂ ಅಡಚಣೆ ಮಾಡದೆ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗದಂತೆ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಗೋಹತ್ಯೆ ಮಸೂದೆ ಅನಗತ್ಯ: ಗೋಹತ್ಯೆ ಮಸೂದೆ ತರುವ ಅಗತ್ಯ ಇಲ್ಲ. ಈಗಾಗಲೇ ರಾಜ್ಯದಲ್ಲಿ ಗೋಹತ್ಯೆ ಮಸೂದೆ ಜಾರಿಯಲ್ಲಿದೆ. ಅವರು ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಮಸೂದೆ ತರುತ್ತಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ನಾಯಕರು ಕೋಮು ಬಣ್ಣ ನೀಡುತ್ತಿದ್ದಾರೆ. ಇದು ಕೂಡ ರೈತರ ಮೇಲೆ ಪರಿಣಾಮ ಬೀರಲಿದೆ. ಅವರು ಯಾವ ರೀತಿ ಮಸೂದೆ ತರುತ್ತಾರೆ ನೋಡೋಣ. ಆ ಮೇಲೆ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಜೆಡಿಎಸ್ ತಮ್ಮ ನಿಲುವು ಬದಲಿಸಬಾರದು

‘ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಜಾರಿ ವಿಚಾರದಲ್ಲಿ ಜೆಡಿಎಸ್ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ. ಇಷ್ಟು ದಿನ ಅವರು ಜಾತ್ಯತೀತ ತತ್ವಗಳ ಮೇಲೆ ರಾಜಕೀಯ ಮಾಡುವುದಾಗಿ ತಿಳಿಸಿದ್ದರು. ಅವರು ತಮ್ಮ ನಿಲುವು ಬದಲಿಸಬಾರದು ಎಂದು ಮನವಿ ಮಾಡುತ್ತೇನೆ. ಆದರೆ ಅವರು ತಮ್ಮ ಹಿತಾಸಕ್ತಿಗಾಗಿ ಬಿಜೆಪಿ ಜತೆ ಕೈಜೋಡಿಸುವುದಾದರೆ ಅದು ಅವರ ಇಚ್ಛೆಗೆ ಬಿಡುತ್ತೇನೆ.’

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News