ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಐದು ದಿನಕ್ಕೆ ಮೊಟಕು ಸಾಧ್ಯತೆ

Update: 2020-12-07 16:12 GMT

ಬೆಂಗಳೂರು, ಡಿ.7: ವಿಧಾನಮಂಡಲದ ಉಭಯ ಸದನಗಳ ಅಧಿವೇಶನವು ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಡಿ.11ರಂದೇ ಮೊಟಕುಗೊಳ್ಳುವ ಸಾಧ್ಯತೆಗಳಿದ್ದು, ಈ ಸಂಬಂಧ ಮಂಗಳವಾರ(ಡಿ.8) ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ.

ಅಧಿವೇಶನವನ್ನು ಡಿ.7 ರಿಂದ 15ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ, ಡಿ.14 ಹಾಗೂ 15ರಂದು ‘ಒಂದು ದೇಶ-ಒಂದು ಚುನಾವಣೆ’ ವಿಷಯದ ಕುರಿತು ವಿಶೇಷ ಚರ್ಚೆ ನಡೆಸುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿಸಿದ್ದರು. ಆದರೆ, ಇದೇ ತಿಂಗಳ ಅಂತ್ಯಕ್ಕೆ ರಾಜ್ಯಾದ್ಯಂತ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ, ಶಾಸಕರು ಅಧಿವೇಶನವನ್ನು ಡಿ.11ರಂದೆ ಮುಕ್ತಾಯಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರ ಬೇಡಿಕೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆಸಿದ್ದು, ಬಹುತೇಕ ಸಚಿವರು ಶಾಸಕರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದು, ಚುನಾವಣೆಯ ಸಿದ್ಧತೆ, ಪ್ರಚಾರಗಳಿಗೆ ಕಾಲಾವಕಾಶ ಕಡಿಮೆಯಾಗುತ್ತದೆ. ಆದುದರಿಂದ, ಅಧಿವೇಶನವನ್ನು ಐದು ದಿನಕ್ಕೆ ಮೊಟಕುಗೊಳಿಸಿ, ‘ಒಂದು ದೇಶ-ಒಂದು ಚುನಾವಣೆ’ ಕುರಿತು ಮುಂದಿನ ಸಾಲಿನ ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿದರೆ ಉತ್ತಮ ಎಂಬ ಸಲಹೆಯು ಸಚಿವ ಸಂಪುಟದಲ್ಲಿ ಹಿರಿಯ ಸಚಿವರು ನೀಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಸದನ ಕಲಾಪ ಸಲಹಾ ಸಮಿತಿಯ ಸಭೆ ಕರೆದು, ಮುಖ್ಯಮಂತ್ರಿ, ಕಾನೂನು ಸಚಿವರ ಉಪಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News