ನೇಮಕಾತಿ ರದ್ದು ಖಂಡಿಸಿ ಅಭ್ಯರ್ಥಿಗಳ ಧರಣಿ ಎರಡನೇ ದಿನಕ್ಕೆ
ಬೆಂಗಳೂರು, ಡಿ.7: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಎಇಇ, ಎಇ ಮತ್ತು ಜೆಇ ಹುದ್ದೆಗಳ ನೇಮಕಾತಿ ರದ್ದು ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ನೊಂದ ಅಭ್ಯರ್ಥಿಗಳ ಧರಣಿ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದ ಅಭ್ಯರ್ಥಿಗಳು, ರಾಜ್ಯ ಸರಕಾರ ಈ ಕೂಡಲೇ ಕೆಪಿಟಿಸಿಎಲ್ ಹುದ್ದೆಗಳ ನೇಮಕಾತಿ ರದ್ದು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನೇರ ನೇಮಕಾತಿಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಕೊರತೆ, ನೆರೆ ಪ್ರವಾಹ, ಕೋವಿಡ್ ನೆಪ ಹೇಳಲಾಗುತ್ತಿದೆ. ಸರಕಾರ ಆರ್ಥಿಕ ಕೊರತೆ ಎದುರಿಸುತ್ತಿದೆ ಅನ್ನುವವರು ಪಂಚಾಯತ್ ಚುನಾವಣೆಗೆ ಸಿದ್ಧತೆ ಯಾಕೆ ನಡೆಸುತ್ತಿದ್ದೀರಿ? ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ನೇಮಕಾತಿಗೊಳಿಸಲು ಸರಕಾರದ ಖಜಾನೆಯಲ್ಲಿ ಹಣವಿಲ್ಲ. ಆದರೆ, ನಿಗಮ-ಮಂಡಳಿಗೆ 500 ರೂ.ಕೋಟಿ ಘೋಷಿಸಲು ಹಣವಿದೆಯೇ ಎಂದು ಅಭ್ಯರ್ಥಿಗಳು ಸರಕಾರವನ್ನು ಪ್ರಶ್ನಿಸಿದರು.
2019ರ ಫೆಬ್ರವರಿ 20 ರಂದು ಕೆಪಿಟಿಸಿಎಲ್ ನೇಮಕಾತಿ ಅಧಿಸೂಚನೆ ಹೊರಡಿಸಿ, ಅ. 5ರಂದು ಕನ್ನಡ ಭಾಷೆ ಸಾಮಾನ್ಯ ಪರೀಕ್ಷೆ ಕೂಡ ನಡೆಸಿದ್ದರು. ಆದರೆ, 2020ರ ನ.21ರಂದು ಸಹಾಯಕ ಇಂಜಿನಿಯರ್ (ವಿದ್ಯುತ್, ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್, ಸಿವಿಲ್), ಕಿರಿಯ ಆಪ್ತ ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿ ರದ್ದು ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯಬಹುದು ಎಂಬ ನಿರೀಕ್ಷೆಯಿಂದ ದಿನದೂಡುತ್ತಿದ್ದವರಿಗೆ ನಿರಾಸೆಯಾಗಿದೆ ಎಂದು ಧರಣಿ ನಿರತ ಹಲವು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಸರಕಾರದ ನಿಲುವನ್ನು ಪ್ರಸ್ತಾಪಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದ್ದೇವೆ. ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ಅಭ್ಯರ್ಥಿಗಳ ಮನವಿ ಆಲಿಸಿದ ಸಿಎಂ ಯಡಿಯೂರಪ್ಪ, ಎಇಇ ಹುದ್ದೆಗಳ ನೇರ ನೇಮಕಾತಿ ಮಾತ್ರ ರದ್ದಾಗಲಿದೆ.
ಉಳಿದ ಎಲ್ಲಾ ಹುದ್ದೆಗಳ ಪರೀಕ್ಷೆ ನಡೆಯಲಿದೆ ಎಂದಿದ್ದರು. ಮುಖ್ಯಮಂತ್ರಿಗಳ ಭರವಸೆ ಮೇರೆಗೆ ಸಾವಿರಾರು ವಿದ್ಯಾರ್ಥಿಗಳು ಕೆಪಿಟಿಸಿಎಲ್‍ನ ಪರೀಕ್ಷೆಗಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ವರ್ಷ ನವೆಂಬರ್ 1ರಂದು ಎಇಇ, ಜೆಇ ಮತ್ತು ಜೆಎ ಹುದ್ದೆಗಳ ನೇಮಕಾತಿ ರದ್ದುಗೊಳಿಸಲಾಗಿದೆ. ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಈಗ ಏಕಾಏಕಿ ಹುದ್ದೆಗಳ ನೇಮಕಾತಿ ರದ್ದುಪಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.