ನಕಲಿ ಡಾಕ್ಟರೇಟ್ ಪದವಿಗಳಿಗೆ ಕಡಿವಾಣ ಹಾಕಲು ಅಧಿವೇಶನದಲ್ಲಿ ಪಕ್ಷಾತೀತ ಆಗ್ರಹ

Update: 2020-12-07 18:03 GMT

ಬೆಂಗಳೂರು, ಡಿ.7: ರಾಜ್ಯದಲ್ಲಿ ನಕಲಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಡೆಯುತ್ತಿರುವ ಡಾಕ್ಟರೇಟ್ ಪದವಿಗಳ ವಿತರಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೇಲ್ಮನೆಯ ಸದಸ್ಯರು ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸಿದರು.

ಸೋಮವಾರ ಮಧ್ಯಾಹ್ನ ಊಟದ ವಿರಾಮದ ಬಳಿಕ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದಸ್ಯರು, ರಾಜ್ಯದಲ್ಲಿ ಕಾನೂನುಬಾಹಿರವಾಗಿ ಅನೇಕ ಕಡೆಗಳಲ್ಲಿ ನಕಲಿ ಡಾಕ್ಟರೇಟ್ ಪದವಿಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಪಡಿಸಿದರು.

ತೇಜಸ್ವಿನಿ ಗೌಡ ಮಾತನಾಡಿ, ಡಾಕ್ಟರೇಟ್ ಪದವಿ ನೀಡಲು ಇರುವ ಮಾನದಂಡಗಳನ್ನು ಮತ್ತಷ್ಟು ಕಠಿಣ ಮಾಡಬೇಕು ಹಾಗೂ ಅಕ್ರಮವಾಗಿ ನಡೆಯುತ್ತಿರುವ ಡಾಕ್ಟರೇಟ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ಧರ್ಮಸೇನಾ, ಈ ಹಿಂದೆ ನನಗೂ ಡಾಕ್ಟರೇಟ್ ಪಡೆದುಕೊಳ್ಳುವಂತೆ ಒಬ್ಬರು ಒತ್ತಡ ಹಾಕಿದ್ದರು. ಒಂದೂವರೆ ಲಕ್ಷ ನೀಡುವಂತೆಯೂ ಹೇಳಿದ್ದರು. ನಾನಂದು ನಿರಾಕರಿಸಿದ್ದೆ. ಆದರೆ, ಅವರು ಪಟ್ಟು ಬಿಡದೇ 25 ಸಾವಿರ ಕೊಡಿ ಅಂದರು, ಕೊನೆಗೆ 50 ಸಾವಿರಕ್ಕೆ ಮೂರು ಜನರಿಗೆ ಡಾಕ್ಟರೇಟ್ ನೀಡುವಂತೆಯೂ ದುಂಬಾಲು ಬಿದ್ದಿದ್ದರು ಎಂದು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸಾಧನೆ ಮಾಡಿದವರಿಗೂ ಹಾಗೂ ಖರೀದಿ ಮಾಡಿದವರಿಗೂ ವ್ಯತ್ಯಾಸವಿಲ್ಲದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುಟ್ಟಣ್ಣ ಪ್ರತಿಕ್ರಿಯಿಸಿ, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನುಮತಿ ಪಡೆದವರು ಹೊರತುಪಡಿಸಿ ಬೇರೆ ಯಾರೂ ಡಾಕ್ಟರೇಟ್ ನೀಡದಂತೆ ಕಾನೂನು ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ಈ ವೇಳೆ ಸಚಿವ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿ, ಮಾನ್ಯತೆಯುಳ್ಳ ಯಾವುದೇ ವಿವಿ ನಕಲಿ ಡಾಕ್ಟರೇಟ್ ನೀಡುತ್ತಿಲ್ಲ. ಯುಜಿಸಿ ಪಟ್ಟಿಯಲ್ಲಿರುವ ಅಥವಾ ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯುಳ್ಳ ವಿವಿ ಪಟ್ಟಿಯಲ್ಲಿರುವರು ಇದನ್ನು ಮಾಡುತ್ತಿಲ್ಲ ಎಂದರು.

ಕಾನೂನು ಬಾಹಿರವಾಗಿ ಒಂದು ಕಾರ್ಯಕ್ರಮ ನಡೆಸಿ, ಡಾಕ್ಟರೇಟ್ ಮುದ್ರಣ ಮಾಡಿಸಿಕೊಂಡು ಹಣ ಪಡೆದು ನೀಡುತ್ತಿದ್ದಾರೆ. ಹೀಗೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತದೆ. ಮಾನ್ಯತೆಯುಳ್ಳ ವಿವಿಗಳು ಪ್ರತಿವರ್ಷ ಮೂರು ಜನರಿಗೆ ಡಾಕ್ಟರೇಟ್ ನೀಡಲು ಅವಕಾಶವಿದ್ದು, ಈಗ ಒಬ್ಬರಿಗಷ್ಟೇ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಅವರಿಗೆ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಕಡತದಿಂದ ಕೈಬಿಡಲಾಯಿತು: ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ವೈ.ನಾರಾಯಣಸ್ವಾಮಿ ಆಟೋ ಚಾಲಕರು, ಡಾನ್‍ಗಳು ಡಾಕ್ಟರೇಟ್ ತಗೊಳ್ಳುತ್ತಿದ್ದಾರೆ ಎಂದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಎಲ್ಲರಿಗೂ ವೃತ್ತಿ ಘನತೆ ಇರುತ್ತದೆ. ಆಟೋ ಚಾಲಕರನ್ನು ಕೀಳಾಗಿ ಮಾತಾಡುವುದು ಸರಿಯಲ್ಲ. ಅವರ ಮಾತನ್ನು ಕಡತದಿಂದ ತೆಗೆಯಬೇಕು ಎಂದರು. ಅದಕ್ಕೆ ಪ್ರತಿಪಕ್ಷದ ಸದಸ್ಯರು ಧ್ವನಿಗೂಡಿಸಿದ್ದರಿಂದ ಸಭಾಪತಿ ಪ್ರತಾಪಚಂದ್ರಶೆಟ್ಟಿ ಆಟೋರಿಕ್ಷಾ ಚಾಲಕರು ಎಂಬುದನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News