ರೈತರ ಹೋರಾಟಕ್ಕೆ ಬೆಂಬಲವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಝಾರೆ

Update: 2020-12-08 07:14 GMT

ಮುಂಬೈ: ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಇಂದು ರೈತರು ನೀಡಿರುವ ಭಾರತ್ ಬಂದ್ ಕರೆಗೆ ಬೆಂಬಲವಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಊರಾದ ಮಹಾರಾಷ್ಟ್ರದ ಅಹ್ಮದ್‍ನಗರ್ ಜಿಲ್ಲೆಯ ರಾಲೆಗಾಂವ್ ಸಿದ್ದಿ ಗ್ರಾಮದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತಮ್ಮ ಉಪವಾಸ ಸತ್ಯಾಗ್ರಹದ ಸಂದರ್ಭ ಅಣ್ಣಾ ಹಜಾರೆ ಅವರು ಧ್ವನಿಮುದ್ರಿತ ಸಂದೇಶವೊಂದನ್ನೂ ಬಿಡುಗಡೆಗೊಳಿಸಿದ್ದಾರೆ ಹಾಗೂ  ದಿಲ್ಲಿಯಲ್ಲಿ ನಡೆಯುತ್ತಿರುವ ಈ ಹೋರಾಟ ದೇಶಾದ್ಯಂತ ವ್ಯಾಪಿಸಬೇಕೆಂದು ದೇಶದ ಜನರಲ್ಲಿ ಅವರು ಕೋರಿದ್ದಾರೆ.

"ಪ್ರಸಕ್ತ ಪರಿಸ್ಥಿತಿಯಲ್ಲಿ ಸರಕಾರದ ಮೇಲೆ ಒತ್ತಡ ಹೇರುವುದು ಅಗತ್ಯವಾಗಿದೆ. ಇದಕ್ಕಾಗಿ ರೈತರು ಬೀದಿಗಿಳಿಯಬೇಕಿದೆ, ಆದರೆ ಯಾರೂ ಹಿಂಸೆಯಲ್ಲಿ ತೊಡಗಬಾರದು,'' ಎಂದು ಅವರು ಹೇಳಿದರು.

"ರೈತರಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬೀದಿಗಿಳಿಯಲು ಇದು ಸರಿಯಾದ ಸಮಯ, ಈ ಉದ್ದೇಶವನ್ನು ನಾನು ಹಿಂದೆಯೂ ಬೆಂಬಲಿಸಿದ್ದೆ ಮುಂದೆಯೂ ಬೆಂಬಲಿಸುವುದನ್ನು ಮುಂದುವರಿಸುತ್ತೇನೆ,'' ಎಂದೂ ಹಝಾರೆ ಹೇಳಿದ್ದಾರೆ.

ಕೃಷಿ  ವೆಚ್ಚಗಳು ಮತ್ತು ದರಗಳ ಆಯೋಗಕ್ಕೆ ಸ್ವಾಯತ್ತತೆ ನೀಡುವ ಅಗತ್ಯತೆಯನ್ನೂ ಒತ್ತಿ ಹೇಳಿದ ಅಣ್ಣಾ ಹಝಾರೆ, ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು. ಈ ಬೇಡಿಕೆಗಳು ಈಡೇರದೇ ಇದ್ದರೆ ಮತ್ತೆ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News