ರಾಜಕೀಯ ಅಸ್ತಿತ್ವಕ್ಕಾಗಿ ಕೇಂದ್ರದ ಕೃಷಿ ಸುಧಾರಣೆಗಳ ವಿರೋಧ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು,ಡಿ. 8: ‘ರಾಜ್ಯದ ಜನತೆ ದೇಶವ್ಯಾಪಿ ಕರೆ ನೀಡಿದ್ದ ಬಂದ್ ಬೆಂಬಲ ನೀಡಿಲ್ಲ. ಅನಗತ್ಯ ಬಂದ್ ಕರೆ ಕೊಡುವ ಬದಲು, ವಾಸ್ತವ ಸ್ಥಿತಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಮೋದಿ ನೇತೃತ್ವದ ಸರಕಾರ ಹಾಗೂ ರಾಜ್ಯ ಸರಕಾರವು ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ರೈತ ವಿರೋಧಿ ಕೆಲಸವನ್ನು ಮಾಡುವುದಿಲ್ಲ. ಇದರ ಬಗ್ಗೆ ಅರಿವಿದ್ದರೂ ರಾಜಕೀಯ ಕಾರಣಕ್ಕೆ ಬಂದ್ ಕರೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ಬಂದ್ ಬಗ್ಗೆ ಜನತೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜನಜೀವನ ಸುಸೂತ್ರವಾಗಿ ನಡೆಸಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ಪ್ರತಿಭಟನೆ ನೆಪದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
‘ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರು ಕಪ್ಪು ಬಟ್ಟೆಯಾದರೂ ಹಾಕಿಕೊಳ್ಳಲಿ, ಬಿಳಿ ಬಟ್ಟೆಯಾದರೂ ಹಾಕಿಕೊಳ್ಳಲಿ ಜನ ಅವರನ್ನು ಕೇಳುವುದಿಲ್ಲ' ಎಂದು ಯಡಿಯೂರಪ್ಪ, ಕಪ್ಪು ಬಾವುಟ, ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ಪ್ರತಿಭಟನೆಗೆ ಲೇವಡಿ ಮಾಡಿದರು.
ಅಸ್ತಿತ್ವಕ್ಕಾಗಿ ಹೋರಾಟ: ರಾಜಕೀಯ ಅಸ್ತಿತ್ವಕ್ಕಾಗಿ ಕೇಂದ್ರ ಸರಕಾರದ ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ಹಿಂದೆ ಅದರ ಪರವಾಗಿದ್ದವು. ಈಗ ಮಸೂದೆ ವಿರುದ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತರಿಗೆ ಆಗುವ ಅನುಕೂಲತೆಗಳನ್ನು ತಪ್ಪಿಸಲು ನಡೆಸುತ್ತಿರುವ ವಿರೋಧವನ್ನು ಒಪ್ಪಲಾಗದು. ಇದರ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ' ಎಂದು ಯಡಿಯೂರಪ್ಪ ಎಚ್ಚರಿಸಿದರು.
‘ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಕೃಷಿ ಉತ್ಪನ್ನಗಳನ್ನು ಸರಕಾರ ಖರೀದಿಸುವ ಪ್ರಕ್ರಿಯೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಖಚಿತವಾಗಿ ಮುಂದುವರಿಯಲಿದೆ. ಜೊತೆಗೆ ರೈತರಿಗೆ ಹೆಚ್ಚಿನ ಅವಕಾಶ, ಆಯ್ಕೆ ಮತ್ತು ಆದಾಯ ಹೆಚ್ಚಿಸಲು ನೂತನ ಕಾಯ್ದೆ ನೆರವಾಗಲಿದೆ'
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ