ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ವಂಚನೆ ಆರೋಪ: ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು

Update: 2020-12-08 16:53 GMT

ಬೆಂಗಳೂರು, ಡಿ.8: ಬ್ಯಾಂಕ್ ಸಿಬ್ಬಂದಿಯೊಬ್ಬರು ತನ್ನ ಸಹೋದರರೊಂದಿಗೆ ಜೊತೆಗೂಡಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಸಂಬಂಧ ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾಪೀಠ ಶಾಖೆಯ ಮುಖ್ಯ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ದೂರು ಸಲ್ಲಿಸಿದ್ದು, ಬ್ಯಾಂಕ್ ಸಿಬ್ಬಂದಿ ಮಾಕಮ್ ವೆಂಕಟೇಶಯ್ಯ ಶೆಟ್ಟಿ, ಈತನ ಸಹೋದರರಾದ ರಾಜೀವ್, ರಾಘವೇಂದ್ರ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.

2012ರಲ್ಲಿ ಬ್ಯಾಂಕ್ ಸಿಬ್ಬಂದಿ ವೆಂಕಟೇಶ್ ಅನ್ನು ವಿದ್ಯಾಪೀಠ ಶಾಖೆಯಲ್ಲಿ ಗ್ರಾಹಕರ ಚಿನ್ನಾಭರಣ ಪರಿಶೀಲಿಸಿ ಪತ್ರ ನೀಡುವ ಪರಿಶೀಲನಾ ಸಿಬ್ಬಂದಿಯಾಗಿ ನೇಮಕಗೊಳಿಸಲಾಗಿತ್ತು. 2013ರಲ್ಲಿ ಈತನ ಸಹೋದರ ರಾಜೀವ್ 689 ಗ್ರಾಂ ನಕಲಿ ಚಿನ್ನವಿಟ್ಟು 96 ಸಾವಿರ ಸಾಲ ಪಡೆದಿದ್ದ. ಅದೇ ವರ್ಷ ಮತ್ತೋರ್ವ ಸಹೋದರ ರಾಘವೇಂದ್ರ 796 ಗ್ರಾಂ ನಕಲಿ ಚಿನ್ನವಿಟ್ಟು 11 ಲಕ್ಷ 20 ಸಾವಿರ ರೂ. ಹಣ ಪಡೆದುಕೊಂಡಿದ್ದ. ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ಹೇಳಿ ವೆಂಕಟೇಶಯ್ಯ ಪ್ರಮಾಣೀಕರಿಸಿದ್ದ ಎಂದು ಆರೋಪಿಸಲಾಗಿದೆ.

ನಂಬಿಕೆಗಾಗಿ ಪಡೆದಿದ್ದ ಸಾಲವನ್ನು ಆರೋಪಿಗಳು ಬ್ಯಾಂಕ್‍ಗೆ ಪಾವತಿ ಮಾಡಿದ್ದರು. ಬಳಿಕ 2019ರವರೆಗೂ ಪ್ರತಿ ವರ್ಷ ಬೇರೆ ಖಾತೆಗಳ ಹೆಸರಿನಲ್ಲಿ ನಕಲಿ ಚಿನ್ನವಿಟ್ಟು ರಾಜೀವ್, ರಾಘವೇಂದ್ರ ಕ್ರಮವಾಗಿ 12 ಲಕ್ಷ ಹಾಗೂ 22 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.

ಹಲವು ತಿಂಗಳು ಕಳೆದರೂ ಸಾಲ ಮರುಪಾವತಿ ಮಾಡಿರಲಿಲ್ಲ. ಗಿರವಿ ಇಟ್ಟಿದ್ದ ಚಿನ್ನ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News