ಕೆಪಿಎಸ್‌ಸಿ ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳ ಒತ್ತಾಯ

Update: 2020-12-08 17:12 GMT

ಬೆಂಗಳೂರು, ಡಿ.8: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಡಿ.21 ರಿಂದ 24 ವರೆಗೆ ನಡೆಸಲು ಉದ್ದೇಶಿಸಿರುವ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳ ಪರೀಕ್ಷೆ ಮುಂದೂಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಡಿ.22ರಂದು ಗ್ರಾಮ ಪಂಚಾಯತ್ ಚುನಾವಣೆಗಳು ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದ ಸರಕಾರಿ ನೌಕರರು ಚುನಾವಣಾ ಕರ್ತವ್ಯಕ್ಕೆ ಹೋಗಬೇಕಾಗುತ್ತದೆ. ಅಭ್ಯರ್ಥಿಗಳು ಮತ್ತು ಸರಕಾರಿ ನೌಕರರು ಮತದಾನದಿಂದಲೂ ವಂಚಿತರಾಗಬೇಕಾಗುತ್ತದೆ. ಪರೀಕ್ಷೆಯನ್ನು ಆಯೋಗ ಮುಂದೂಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಯುವ ಈ ದಿನಾಂಕಗಳಂದೇ ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯು ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ (ಸಿಎಸ್) ಹಾಗೂ ಸಿಬ್ಬಂದಿ ನೇಮಕ ಆಯೋಗದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ನಂತರ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯು ಜ.8ರಿಂದ ಪ್ರಾರಂಭವಾಗಲಿದೆ ಎಂದೂ ಹಲವು ಅಭ್ಯರ್ಥಿಗಳು ತಿಳಿಸಿದ್ದಾರೆ.

ಆಯೋಗವು ಕೆಎಎಸ್ ಮುಖ್ಯಪರೀಕ್ಷೆಗಳನ್ನು ಮುಂದೂಡಿ ಆ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಮುಖ್ಯಮಂತ್ರಿಯವರು ಎರಡೂ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆದೇಶಿದ್ದರು. ಆದರೆ, ಆಯೋಗ ಕೆಎಎಎಸ್ ಮುಖ್ಯಪರೀಕ್ಷೆಯನ್ನು ಮಾತ್ರ ಮುಂದೂಡಿದೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕಚೇರಿಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News