ಭೂ ಸುಧಾರಣಾ ತಿದ್ದುಪಡಿ ವಿಧೇಯಕ ತಾಯಿ-ಮಕ್ಕಳನ್ನು ಬೇರ್ಪಡಿಸುವ ಕರಾಳ ಶಾಸನ: ಎಸ್.ಆರ್.ಪಾಟೀಲ್

Update: 2020-12-08 17:24 GMT

ಬೆಂಗಳೂರು, ಡಿ.8: ಕರ್ನಾಟಕ ಭೂ ಸುಧಾರಣಾ ಎರಡನೇ ತಿದ್ದುಪಡಿ ವಿಧೇಯಕವು ತಾಯಿ-ಮಕ್ಕಳನ್ನು ಬೇರ್ಪಡಿಸುವಂತಹ ಕರಾಳ ಶಾಸನವಾಗಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಕುರಿತ ಚರ್ಚೆಯ ಮೇಲೆ ಮಾತನಾಡಿದ ಅವರು, ಬಂಡವಾಳಶಾಹಿಗಳಿಗೆ, ಕಾಳಧನಿಕರಿಗೆ, ರಿಯಲ್ ಎಸ್ಟೇಟ್ ಮಾಡುವವರಿಗೆ ವರದಾನವಾಗಲಿದೆ ಈ ಕಾಯ್ದೆ. ಇದು ತಾಯಿ-ಮಕ್ಕಳ ಸಂಬಂಧವಿದ್ದಂತಿರುವ ರೈತರಿಗೆ ಕರಾಳ ಶಾಸನವಾಗಲಿದೆ ಎಂದರು.

ಈ ಕಾಯ್ದೆಯು ರೈತರ ಶವಪೆಟ್ಟಿಗೆ ಮೇಲೆ ಕೊನೆ ಮೊಳೆ ಹೊಡೆಯುವಂತಿದೆ. ಆದುದರಿಂದಾಗಿ ಸರಕಾರ ವಿಧೇಯಕವನ್ನು ಹಿಂಪಡೆಯಬೇಕು ಹಾಗೂ ಜನಾಭಿಪ್ರಾಯ ಪಡೆದು ಮುಂದುವರಿಯಬೇಕು. ನಾಡಿನ ರೈತರ ಪ್ರಶ್ನೆಯಾಗಿರುವುದರಿಂದ ವಿಶೇಷ ಅಧಿವೇಶನ ನಡೆಸಿ, ಅಲ್ಲಿ ಈ ಕಾಯ್ದೆಯ ಕುರಿತು ಹೆಚ್ಚಿನ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ವಿಪಕ್ಷ ಮುಖ್ಯಸಚೇತಕ ಎಂ.ನಾರಾಯಣಸ್ವಾಮಿ, ಯಾರದೋ ಒತ್ತಡಕ್ಕಾಗಿ ವಿಧೇಯಕ ಮಾಡಲಾಗಿದೆ. ಆತುರವಾಗಿ ಕಾಯ್ದೆಯನ್ನು ಅನುಮೋದಿಸುವಂತೆ ಒತ್ತಡ ಹೇರಲಾಗುತ್ತಿದೆ. ಬಿಜೆಪಿಯವರು ಆತ್ಮಸಾಕ್ಷಿಗೆ ಬದ್ಧರಾಗಿ ಕಾಯ್ದೆಯನ್ನು ತರಲಿ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಕೊರೆಯುವ ಚಳಿಯಲ್ಲಿಯೂ ಹೋರಾಟ ಮಾಡುತ್ತಿದ್ದಾರೆ. ಆದರೆ, ಸರಕಾರ ಅವರ ಬೇಡಿಕೆಗೆ ಸ್ಪಂದಿಸದಿರುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News