ಬಿಬಿಎಂಪಿ ವಿಧೇಯಕ ಉಭಯ ಸದನಗಳಲ್ಲಿ ಮಂಡನೆ: ವಾರ್ಡ್ ಸಂಖ್ಯೆ, ಮೇಯರ್ ಅಧಿಕಾರಾವಧಿ ಹೆಚ್ಚಳ
ಬೆಂಗಳೂರು, ಡಿ.9: ಬಿಬಿಎಂಪಿ ವಾರ್ಡ್‍ಗಳ ಹೆಚ್ಚಳ, ಮೇಯರ್ ಅವಧಿ ವಿಸ್ತರಣೆ, ವಲಯಗಳ ಹೆಚ್ಚಳ, ಸ್ಥಾಯಿ ಸಮಿತಿಗಳ ಸದಸ್ಯರ ಏರಿಕೆ, ಪ್ರತಿ ವಲಯಕ್ಕೆ ಸದಸ್ಯರ ನೇಮಕ, ಮುಖ್ಯ ಕಾರ್ಯದರ್ಶಿ ಮಾದರಿಯ ಆಯುಕ್ತರ ನೇಮಕ ಒಳಗೊಂಡಂತೆ 2020ನೇ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ, ಅಂಗೀಕರಿಸಲಾಗಿದೆ.
ಬುಧವಾರ ಉಭಯ ಸದನಗಳಲ್ಲಿ ವಿಧೇಯಕವನ್ನು ಮಂಡಿಸಲಾಗಿದೆ. ಅದು ಚರ್ಚೆಯ ನಂತರ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಸಮಿತಿ ನೀಡಿರುವ ವರದಿಯಂತೆ ಇನ್ನು ಮುಂದೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಅಸ್ತಿತ್ವಕ್ಕೆ ಬರಲಿದ್ದು, ಹಾಲಿ ಇರುವ 198 ವಾರ್ಡ್ ಗಳಿಂದ 243 ವಾರ್ಡ್‍ಗಳಿಗೆ ಹೆಚ್ಚಳವಾಗಲಿದೆ.
ವರದಿಯಲ್ಲಿ ಪ್ರಮುಖವಾಗಿ ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆಯನ್ನು 12ರಿಂದ 15ಕ್ಕೆ ಹೆಚ್ಚಳ ಮಾಡುವುದು, ವಲಯಗಳನ್ನು 12ಕ್ಕೆ ಹೆಚ್ಚಳ ಮಾಡುವುದು, ಮುಖ್ಯ ಕಾರ್ಯದರ್ಶಿಗಳ ಮಾದರಿಯಲ್ಲಿ ಬಿಬಿಎಂಪಿಗೆ ಆಯುಕ್ತರನ್ನು ನೇಮಕ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈವರೆಗೂ ಬಿಬಿಎಂಪಿ ಮೇಯರ್ ಅಧಿಕಾರ ಅವಧಿ ಒಂದು ವರ್ಷ ಇತ್ತು. ಇನ್ನು ಮುಂದೆ ಅವರ ಅಧಿಕಾರ ಅವಧಿ 30 ತಿಂಗಳಿಗೆ ನಿಗದಿಯಾಗಲಿದೆ. ಸ್ಥಾಯಿಸಮಿತಿ ಸದಸ್ಯರ ಸಂಖ್ಯೆ 12ರಿಂದ 15ಕ್ಕೆ ಏರಿಕೆಯಾದರೆ ಪ್ರತಿ ವಲಯಗಳಿಗೆ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆಗೆ ಅವಕಾಶ ನೀಡಲಾಗಿದೆ.
ವಲಯ ಮಟ್ಟದಲ್ಲಿ ಒಬ್ಬ ಪಾಲಿಕೆ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡುವುದು, ಪ್ರತಿ ವಲಯಕ್ಕೂ ವಿಶೇಷ ಆಯುಕ್ತರು ಕಾರ್ಯ ನಿರ್ವಹಿಸಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ. ಸಮಿತಿಯು 24-8-2020, 04-09-2020, 07-09-2020, 15-09-2020, 6-10-2020, 21-1-2020 ಹಾಗೂ 7-12-20202ರಲ್ಲಿ ಸಭೆ ನಡೆಸಿ ನಿಗದಿತ ಸಂದರ್ಭದಲ್ಲಿ ವರದಿಯನ್ನು ಸಲ್ಲಿಸಲಾಗದ ಕಾರಣ ವಿಸ್ತರಣೆ ಮಾಡಲಾಗಿತ್ತು. ಎಲ್ಲ ಸದಸ್ಯರ ಒಟ್ಟಾರೆ ಅಭಿಪ್ರಾಯವನ್ನು ಸಂಗ್ರಹಿಸಿ ವರದಿಯನ್ನು ಬುಧವಾರ ಸಲ್ಲಿಕೆ ಮಾಡಲಾಗಿದೆ.
ಸಚಿವರಾದ ಎಸ್.ಸುರೇಶ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಎನ್.ನಾರಾಯಣಸ್ವಾಮಿ, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಅರವಿಂದ ಲಿಂಬಾವಳಿ, ನರಸಿಂಹನಾಯಕ್, ಎಂ.ಕೃಷ್ಣಪ್ಪ, ರವಿಸುಬ್ರಹ್ಮಣ್ಯ, ಎಂ.ಸತೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್, ಡಾ.ಕೆ.ಎಸ್.ಶ್ರೀನಿವಾಸ್ ಮೂರ್ತಿ, ಉದಯ ಡಿ. ಗರುಡಾಚಾರ್, ಆರ್.ಮಂಜುನಾಥ್ ಹಾಗೂ ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿಗೌಡ, ಕೆ.ಗೋವಿಂದ ರಾಜ್, ಪಿ.ಆರ್.ರಮೇಶ್, ಎನ್.ರವಿಕುಮಾರ್, ಆ.ದೇವೇಗೌಡ ಹಾಗೂ ಕೆ.ಎಸ್.ತಿಪ್ಪೇಸ್ವಾಮಿ ಸಮಿತಿಯ ಸದಸ್ಯರಾಗಿದ್ದರು.