ಮುಸ್ಲಿಮರ ಸಶಕ್ತೀಕರಣ ದೇಶದ ಅಭಿವೃದ್ಧಿಯ ಭಾಗವಲ್ಲವೇ?

Update: 2020-12-10 05:23 GMT

ಕೊರೋನ ಸಾಂಕ್ರಾಮಿಕಕ್ಕಿಂತ ಮೊದಲೇ ಭಾರತದ ಅರ್ಥವ್ಯವಸ್ಥೆ ಅನಿಶ್ಚಿತತೆಯಲ್ಲಿತ್ತು. ಕೊರೋನ ಸೋಂಕು ಮತ್ತೊಂದು ಮಾರಕ ಹೊಡೆತ ನೀಡಿತು. ಮಿಲಿಯಾಂತರ ಜನರ ಜೀವನಾಧಾರ ನಷ್ಟವಾಯಿತು. ಮಿಲಿಯಾಂತರ ಜನರು ಶಾಶ್ವತವಾಗಿ ಬಡತನದ ದೀನತೆಗೆ ನೂಕಲ್ಪಟ್ಟರು. ಬಂದೂಕಿನಿಂದ ಆದ ಗಾಯಕ್ಕೆ ಬ್ಯಾಂಡೇಜ್ ಕಟ್ಟುವಂತೆ, ಆರ್ಥಿಕ ತಜ್ಞರು ಹಾಗೂ ಆಡಳಿತ ಪಕ್ಷದ ರಾಜಕಾರಣಿಗಳು ಹಲವು ಪರಿಹಾರಗಳನ್ನು ಸೂಚಿಸಿದರಾದರೂ ಪರಿಣಾಮ ನಿರೀಕ್ಷೆಯಂತಿಲ್ಲ. ಕೊರೋನದ ಬಳಿಕ ಈ ದೇಶದ ದುರ್ಬಲ ಸಮುದಾಯಗಳು ಅಭಿವೃದ್ಧಿಯಿಂದ ಸಂಪೂರ್ಣ ಹೊರಗೆ ಬಿದ್ದಿದೆ. ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರು. ವಿಪರ್ಯಾಸವೆಂದರೆ, ಮುಸ್ಲಿಮರನ್ನು ಆರ್ಥಿಕತೆಯಿಂದ ಹೊರಗಿಡುವುದು ಸಂಘಪರಿವಾರದ ಪರೋಕ್ಷ ಅಜೆಂಡಾವು ಆಗಿದೆ. ಮುಸ್ಲಿಮರೂ ಈ ದೇಶದ ಆರ್ಥಿಕತೆಯ ಭಾಗವಾಗಿದ್ದಾರೆ ಎನ್ನುವುದನ್ನು ಸರಕಾರವೂ ಮರೆತಂತಿದೆ. ದಲಿತರು, ಮುಸ್ಲಿಮರನ್ನು ಆರ್ಥಿಕತೆಯಿಂದ ಹೊರಗಿಟ್ಟರೆ ದೇಶ ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವ ಪ್ರಾಥಮಿಕ ಅರಿವನ್ನು ಸರಕಾರ ತನ್ನದಾಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಭಾರತದ ಜನಸಂಖ್ಯೆಯಲ್ಲಿ ಶೇ.14.2ರಷ್ಟು ಮುಸ್ಲಿಮರಿದ್ದಾರೆ. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ, ಸರಕಾರಿ ಉದ್ಯೋಗದಲ್ಲಿ ಅವರ ಪ್ರಮಾಣ ಕಡಿಮೆಯಿದೆ. ಬಹಳಷ್ಟು ಜನರು ನಗರಕೇಂದ್ರ ಪ್ರದೇಶಗಳಲ್ಲಿ ನೆಲೆಸಿದ್ದರೂ ಸರಕಾರಿ ಉದ್ಯೋಗ, ರಾಜಕೀಯ, ವಿಶ್ವವಿದ್ಯಾನಿಲಯದ ಉದ್ಯೋಗಿಗಳಲ್ಲಿ ಮುಸ್ಲಿಮರ ಸಂಖ್ಯೆ ಏನೇನೂ ಇಲ್ಲ.

ಸರಕಾರಿ ಉದ್ಯೋಗಿಗಳಲ್ಲಿ ಮುಸ್ಲಿಮರ ಪ್ರಮಾಣ ಕೇವಲ ಶೇ.4.9, ಭದ್ರತಾ ಪಡೆಗಳಲ್ಲಿ ಮುಸ್ಲಿಮರ ಪ್ರಮಾಣ ಕೇವಲ ಶೇ.3.2. ಸುಮಾರು 10 ವರ್ಷದ ಹಿಂದೆ ಬಿಡುಗಡೆಯಾಗಿರುವ ಸಾಚಾರ್ ಆಯೋಗದ ವರದಿಯಲ್ಲಿ ಭಾರತೀಯ ಮುಸ್ಲಿಮರು ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿರುವುದನ್ನು ಹಲವು ಅಂಕಿಅಂಶಗಳ ಸಹಿತ ವಿವರಿಸಲಾಗಿದೆ. ಭಾರತೀಯರ ಸರಾಸರಿ ತಲಾ ಆದಾಯ (ಎಂಪಿಸಿಇ) 1,128 ರೂ. ಆಗಿದ್ದರೆ ಮುಸ್ಲಿಮರಲ್ಲಿ ಇದು 980 ರೂ. ಆಗಿದೆ. ಸಾಮಾಜಿಕ-ಆರ್ಥಿಕ ನಷ್ಟದ ಜೊತೆಗೆ ಕೋಮು ಗಲಭೆ ಮತ್ತು ಹಿಂಸಾಚಾರದ ಭಯದೊಂದಿಗೆ ಮುಸ್ಲಿಮರು ಜೀವನ ಸಾಗಿಸುವಂತಾಗಿದೆ. 2013ರಲ್ಲಿ ಪ್ರಕಟವಾಗಿರುವ ವಿಶ್ವಬ್ಯಾಂಕ್ ವರದಿಯ ಪ್ರಕಾರ, ಸುಮಾರು ಶೇ.34ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದರೆ, ಬಡತನ ರೇಖೆಗಿಂತ ಕೆಳಗಿರುವ ಹಿಂದುಗಳ ಪ್ರಮಾಣ ಶೇ.19. ಭಾರತದಲ್ಲಿ ಜೈಲಿನಲ್ಲಿರುವ ಜನರಲ್ಲಿ ಶೇ.40ರಷ್ಟು ಮುಸ್ಲಿಮರಾಗಿರುವುದು ವಿಷಾದನೀಯವಾಗಿದೆ. ಮೋದಿಯ ಆಡಳಿತದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ರಾಜಕೀಯ ಕಾರಣಗಳಿಗಾಗಿ ಜೈಲು ಪಾಲಾಗುತ್ತಿರುವ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಮುಸ್ಲಿಮರ ಕುರಿತಂತೆ ಸರಕಾರದ ನೇತೃತ್ವದಲ್ಲೇ ಬಿತ್ತಲಾಗುತ್ತಿರುವ ಪೂರ್ವಾಗ್ರಹಗಳು ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದೆ ಉಳಿಯುವಂತೆ ಮಾಡಿದೆ. ಈ ಮೂಲಕ ಬರೇ ಮುಸ್ಲಿಮರು ಮಾತ್ರವಲ್ಲ, ರಾಷ್ಟ್ರವೇ ಹಿಂದಕ್ಕೆ ಚಲಿಸುತ್ತಿದೆ. ಯಾಕೆಂದರೆ ಮುಸ್ಲಿಮರನ್ನು ಹೊರಗಿಟ್ಟು ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.

ಸಾಮಾಜಿಕ ಮತ್ತು ಧಾರ್ಮಿಕ ಸಂಘರ್ಷ ಹೆಚ್ಚಿದಂತೆಲ್ಲಾ ಯಾವುದೇ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ತೀವ್ರವಾದ ವ್ಯತಿರಿಕ್ತ ಪರಿಣಾಮ ಬೀರುವುದು ಸಂಶೋಧನೆಯಿಂದ ತಿಳಿದು ಬಂದಿದೆ. 2016-17ರ ಆರ್ಥಿಕ ವರ್ಷದಲ್ಲಿ ಕೋಮು ಮತ್ತು ಜಾತಿ ಆಧಾರಿತ ಹಿಂಸಾಚಾರದಿಂದ 1,190 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗಿದೆ ಎಂದು ಆಸ್ಟ್ರೇಲಿಯದ ಚಿಂತಕರ ಚಾವಡಿ ‘ಇನ್‌ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೀಸ್’ ವರದಿ ಮಾಡಿದೆ. ಇದು ಜಿಡಿಪಿಯ ಶೇ.8 ಆಗಿದೆ ಮತ್ತು ಪ್ರತೀ ವ್ಯಕ್ತಿಗೆ 40,000 ರೂ. ನಷ್ಟವಾದಂತೆ. ಭಾರತದಲ್ಲಿ ಸಾಮಾಜಿಕ ಮತ್ತು ಕೋಮು ಉದ್ವಿಗ್ನತೆ ಹೆಚ್ಚಿರುವುದರಿಂದ ಜಾಗತಿಕ ಹೂಡಿಕೆದಾರರ ಒಲವನ್ನು ಕಳೆದುಕೊಂಡಿದೆ ಎಂದು ಹಲವು ಜಾಗತಿಕ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋಮು ಹಿಂಸೆ ಯಾವ ರೀತಿ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಚರ್ಮದ ಉದ್ಯಮದ ಉದಾಹರಣೆ ಸೂಕ್ತವಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ಭಾರತದಿಂದ ರಫ್ತಾಗುವ ಚರ್ಮವನ್ನು ದುಪ್ಪಟ್ಟುಗೊಳಿಸಬೇಕು ಎಂಬುದು ಪ್ರಧಾನಿ ಮೋದಿಯ ಉದ್ದೇಶವಾಗಿದೆ. ಆದರೆ 2013-14ರಲ್ಲಿ ಶೇ.20 ಅಭಿವೃದ್ಧಿ ಹೊಂದಿದ್ದ ಚರ್ಮದ ರಫ್ತು 2017-18ರಲ್ಲಿ ಶೇ.3 ಕುಸಿತ ಕಂಡಿದೆ. ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆ, ಸುಮಾರು 5 ಮಿಲಿಯನ್ ಜನತೆಗೆ ಉದ್ಯೋಗ ಕಲ್ಪಿಸಿರುವ (ಇವರಲ್ಲಿ ಹೆಚ್ಚಿನವರು ಸಮಾಜದ ದುರ್ಬಲ ವರ್ಗದವರು) ಚರ್ಮ ಉದ್ಯಮದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಮರಿಗೆ ಶಿಕ್ಷಣ ಪಡೆಯಲು ಸೂಕ್ತ ಮತ್ತು ಅಗತ್ಯದ ಕ್ರಮಗಳನ್ನು ಕೈಗೊಂಡು ಅವರನ್ನು ಸಾಮಾಜಿಕ ಮತ್ತು ಆರ್ಥಿಕ ಮುಖ್ಯವಾಹಿನಿಗೆ ತರಬೇಕು. ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮುಸ್ಲಿಮರು ಸಕ್ರಿಯ ಪಾತ್ರ ವಹಿಸಬೇಕು. ಭಾರತದ ಅಭಿವೃದ್ಧಿಯಲ್ಲಿ ಅವರೂ ಸಮಾನ ಪಾಲುದಾರರಾಗಬೇಕು. ಮುಸ್ಲಿಮರಲ್ಲಿ ದೈಹಿಕ ಸುರಕ್ಷತೆ, ಆಸ್ತಿಯ ಸುರಕ್ಷತೆಯನ್ನು ಸರಕಾರ ಖಾತರಿಗೊಳಿಸಬೇಕು. ಕೋಮು ಹಿಂಸೆಯ ಸೂತ್ರಧಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಲ್ಲದೆ, ಆಡಳಿತದ ಮೇಲೆ ಮುಸ್ಲಿಮ್ ಸಮುದಾಯದ ವಿಶ್ವಾಸವನ್ನು ಪುನರ್‌ಸ್ಥಾಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು.

ಇತರ ದುರ್ಬಲ ವರ್ಗದವರಾದ ದಲಿತರು ಮತ್ತು ಒಬಿಸಿ ವರ್ಗದವರಿಗೆ ನೀಡಿದಂತೆಯೇ ಮುಸ್ಲಿಮರಿಗೂ ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಒಬಿಸಿ ಮತ್ತು ದಲಿತರಿಗೆ ಉದ್ಯೋಗದಲ್ಲಿ ನೀಡುವ ಮೀಸಲಾತಿಯಲ್ಲಿ ಮುಸ್ಲಿಮರಲ್ಲಿ ಅತೀ ಹಿಂದುಳಿದವರಿಗೆ ಒಂದು ಭಾಗ ಇರಬೇಕು. ಅಪೇಕ್ಷಿತ ಪ್ರಮಾಣದಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಗುರಿ ತಲುಪುವವರೆಗೆ ವಿಶೇಷ ನೇಮಕಾತಿ ಅಭಿಯಾನದಂತಹ ಕ್ರಮ ಕೈಗೊಳ್ಳಬೇಕು. ಬಡತನದಿಂದಾಗಿ ಬಹುತೇಕ ಮುಸ್ಲಿಮರು ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ತೊರೆಯುತ್ತಾರೆ ಅಥವಾ ಶಾಲೆಗೆ ಹೋಗುವುದಿಲ್ಲ. ಮದರಸಾಗಳಲ್ಲಿ ಉದ್ಯೋಗ ಕೇಂದ್ರಿತ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆ ಮಾಡಬೇಕು. ಮುಸ್ಲಿಮ್ ಸಮುದಾಯದವರಿಗೆ ಉನ್ನತ ಶಿಕ್ಷಣ ಪಡೆಯುವಂತಾಗಲು ಪ್ರತೀ ರಾಜ್ಯದಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಕಾನೂನು ಶಿಕ್ಷಣ ನೀಡುವ ಅಲ್ಪಸಂಖ್ಯಾತ ವಿವಿಗಳನ್ನು ಆರಂಭಿಸಿ ಇದರಲ್ಲಿ ಮುಸ್ಲಿಮರಿಗೆ ಹೆಚ್ಚಿನ ಮೀಸಲಾತಿ ಒದಗಿಸಬೇಕು. ಮುಸ್ಲಿಮ್ ಕೇಂದ್ರಿತ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವೃತ್ತಿ ಮಾರ್ಗದರ್ಶನ ಮತ್ತು ಸಲಹಾ ಕೇಂದ್ರ ಮತ್ತು ಉದ್ಯೋಗ ಮಾರ್ಗದರ್ಶನ ಕೇಂದ್ರ ಆರಂಭಿಸಬೇಕು. ಕೊರೋನೋತ್ತರ ಯುಗದಲ್ಲಿ ಭಾರತ ಆರ್ಥಿಕ ಸೂಪರ್‌ಶಕ್ತಿಯಾಗಿಹೊರ ಹೊಮ್ಮಬೇಕಿದ್ದರೆ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಸಬಲೀಕರಣ ಗೊಳಿಸುವತ್ತ ಆದ್ಯತೆ ನೀಡಬೇಕಾಗಿದೆ. ಮುಸ್ಲಿಮ್ ದ್ವೇಷ ಅಂತಿಮವಾಗಿ ಈ ದೇಶವನ್ನೇ ನಾಶದೆಡೆಗೆ ಕೊಂಡೊಯ್ಯುತ್ತದೆ ಎನ್ನುವ ಎಚ್ಚರಿಕೆ ನಮ್ಮನ್ನು ಆಳುವವರಿಗೆ ಇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News