ಮರಕ್ಕೆ ಮೊಳೆ ಹೊಡೆದರೆ ಕ್ರಿಮಿನಲ್ ಕೇಸ್: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-12-09 18:00 GMT

ಬೆಂಗಳೂರು, ಡಿ.9: ನಗರ ವ್ಯಾಪ್ತಿಯಲ್ಲಿರುವ ಮರಗಳಿಗೆ ಯಾರಾದರೂ ಬಿತ್ತಿಪತ್ರಗಳು ಅಂಟಿಸಿ, ಮೊಳೆ ಹೊಡೆದರೆ 'ಕ್ರಿಮಿನಲ್‍ ಪ್ರಕರಣ' ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದರು.

ಬುಧವಾರ ನಗರದ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಬಿ-ಪ್ಯಾಕ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ‘ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮರಗಳ ಮೇಲೆ ಬಿತ್ತಿಪತ್ರಗಳು ಅಂಟಿಸುವುದು, ಮೊಳೆ ಹೊಡೆಯುವುದನ್ನು ನಿಷೇಧಿಸಿದ್ದರೂ ಸಹ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸುತ್ತಿದ್ದಾರೆ. ಅಂತವರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮರಗಳಿಗೆ ಹಾನಿ ಮಾಡುವ, ಮೊಳೆ, ಸ್ಟ್ಯಾಪ್ಲರ್ ನಲ್ಲಿ ಪಿನ್ ಹೊಡೆಯುವ ಸಂಬಂಧ ಕಾನೂನಿನಲ್ಲಿ ತಿದ್ದುಪಡಿ ತಂದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದರೆ ಈ ರೀತಿಯ ಸಮಸ್ಯೆ ಬಗೆಹರಿಯಲಿದೆ ಎಂದರು.

ಮರಗಳು ಕೂಡ ಮನುಷ್ಯರು ಇದ್ದ ಹಾಗೆ. ಮನುಷ್ಯರಿಗೆ ನೋವಾದ ಹಾಗೆಯೇ ಮರಗಳಿಗೂ ಕೂಡಾ ನೋವಾಗುತ್ತದೆ. ಮರಕ್ಕೆ ಮೊಳೆ, ಕೇಬಲ್, ತಂತಿಗಳನ್ನು ಸುತ್ತಿದರೆ ಗಾಯವಾಗಿ ಸರಿಯಾಗಿ ಆಹಾರ, ನೀರು, ಪೌಷ್ಟಿಕಾಂಶ ಸಿಗದೆ ಮರಗಳು ಸಾವನ್ನಪ್ಪಲಿವೆ ಎಂದು ನುಡಿದರು.

ನಗರದಲ್ಲಿ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಲು ಮೊಳೆ, ಸ್ಟ್ಯಾಪ್ಲರ್ ಮೂಲಕ ಪಿನ್ ಹೊಡೆದಿದ್ದಾರೆ. ಅಲ್ಲದೆ, ಕೇಬಲ್‍ಗಳನ್ನು ಮರಗಳಿಗೆ ಸುತ್ತಿದ್ದಾರೆ. ಈ ಸಂಬಂಧ ಬಿ ಪ್ಯಾಕ್ ಸಂಸ್ಥೆ ವತಿಯಿಂದ ಮರಗಳಿಗೆ ಅಂಟಿಸಿರುವ ಬಿತ್ತಿಪತ್ರ, ಹೊಡೆದಿರುವ ಮೊಳೆ, ಸ್ಟ್ಯಾಪ್ಲರ್ ಮೂಲಕ ಹೊಡೆದಿರುವ ಪಿನ್‍ಗಳನ್ನು ತೆಗೆಯಲು ಹಮ್ಮಿಕೊಂಡಿರುವ 'ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನ' ಶ್ಲಾಘನೀಯ ಎಂದು ಆಯುಕ್ತರು ತಿಳಿಸಿದರು.

ಮರ ಸ್ಥಳಾಂತರ: ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ಸಂಸ್ಥೆ ಬಳಿ ಮರಗಳನ್ನು ಸ್ಥಳಾಂತರ ಮಾಡುವ ದೊಡ್ಡ ಯಂತ್ರಗಳಿವೆ. ಅವರು ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಸ್ಥಳದಲ್ಲಿ ದೊಡ್ಡದೊಡ್ಡ ಮರಗಳಿದ್ದರೆ ಅದನ್ನು ಉಚಿತವಾಗಿ ಬೇರೆಡೆ ಸ್ಥಳಾಂತರ ಮಾಡಲು ಒಪ್ಪಿದ್ದಾರೆ.

ಅವರ ಸೇವೆಯನ್ನು ಬಳಸಿಕೊಂಡು ಮರಗಳನ್ನು ಕಡಿಯದೆ ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲೆಲ್ಲಾ ಮರಗಳ ಸ್ಥಳಾಂತರ ಮಾಡಲು ಕ್ರಮ ವಹಿಸಲಾಗುವುದು ಎಂದು ಮಂಜುನಾಥ ಪ್ರಸಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News