ಏಮ್ಸ್ ಪ್ರವೇಶ ಪರೀಕ್ಷೆ: ಬೆಂಗಳೂರಿನ ಡಾ.ಸೈಯದ್ ಅಹ್ಮದ್ ರಿಗೆ ದ್ವಿತೀಯ ರ‌್ಯಾಂಕ್
ಬೆಂಗಳೂರು, ಡಿ.10: ಹೊಸದಿಲ್ಲಿಯ ಏಮ್ಸ್(ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್) ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರಿನ ಡಾ.ಸೈಯದ್ ಅಹ್ಮದ್ ಅವರು ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ.
ಡಾ.ಸೈಯದ್ ಅಹ್ಮದ್ ಅವರು ಡಿಎಂ- ಗ್ಯಾಸ್ಟ್ರೊಎಂಟ್ರಾಲಜಿ ವಿಭಾಗದಲ್ಲಿ 66.66 ಶೇ. ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ನವೆಂಬರ್ 20ರಂದು ನಡೆದಿದ್ದ ಈ ಪ್ರವೇಶ ಪರೀಕ್ಷೆಯ ಫಲಿತಾಂಶ ಡಿ.5ರಂದು ಪ್ರಕಟಗೊಂಡಿದೆ.
ಡಾ.ಸೈಯದ್ ಅಹ್ಮದ್ ಅವರು ಬೆಂಗಳೂರು ಮೆಡಿಕಲ್ ಕಾಲೇಜು ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ವೈದ್ಯಕೀಯ ಪದವಿ(2016), ಚಂಡೀಗಢದ ಪೋಸ್ಟ್ ಗ್ರ್ಯಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್(ಪಿಜಿಐಎಂಇಆರ್)ನಲ್ಲಿ ಎಂ.ಡಿ.(2019) ಮಾಡಿದ್ದಾರೆ. ಬಳಿಕ ಆರು ತಿಂಗಳ ಕಾಲ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಫಲಿತಾಂಶದ ಕುರಿತಂತೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿದ ಅವರು, ‘‘ಫಲಿತಾಂಶ ತುಂಬಾ ಖುಷಿ ತಂದಿದೆ. ಗ್ಯಾಸ್ಟೊಎಂಟ್ರಾಲಜಿ ಇಷ್ಟದ ವಿಷಯವಾಗಿದ್ದು, ಪರೀಕ್ಷೆಗೆ ಸುಮಾರು ನಾಲ್ಕು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದೆ, ತುಂಬಾ ಶ್ರಮ ಪಟ್ಟಿದ್ದೆ. ಆದ್ದರಿಂದ ಉತ್ತಮ ಫಲಿತಾಂಶದ ನಿರೀಕ್ಷೆ ಇತ್ತು’’ ಎಂದಿದ್ದಾರೆ.
''ಕಳೆದ ವರ್ಷನೂ ಈ ಪರೀಕ್ಷೆ ಬರೆದಿದ್ದೆ. ಆದರೆ ಆ ಸಂದರ್ಭದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಕಾರಣ ಕೆಲಸದ ಒತ್ತಡದ ನಡುವೆ ಅಷ್ಟೊಂದು ಸಿದ್ಧತೆ ಮಾಡಿಕೊಳ್ಳಲು ಆಗಿರಲಿಲ್ಲ. ಆದ ಕಾರಣ ನಿರೀಕ್ಷಿತ ಫಲಿತಾಂಶ ದಾಖಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಉತ್ತಮ ಫಲಿತಾಂಶ ದಾಖಲಿಸಿರುವುದು ಸಂತಸ ತಂದಿದೆ’’ ಎಂದಿದ್ದಾರೆ.
ಬೆಂಗಳೂರಿನ ಲಕ್ಕಸಂದ್ರ ನಿವಾಸಿಯಾಗಿರುವ ಡಾ.ಸೈಯದ್ ಅಹ್ಮದ್ ಅವರು ಸೈಯದ್ ಖಲಂದರ್ ಮತ್ತು ಆಯಿಶಾ ಖಾನಂ ಅವರ ಪುತ್ರ. ತಾಯಿ ಬೆಂಗಳೂರಿನಲ್ಲಿ ರೇಷ್ಮೆ ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿದ್ದರೆ, ತಂದೆ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ.