×
Ad

ವಾರ್ಡ್‍ಗಳ ಸಂಖ್ಯೆ ಹೆಚ್ಚಳಕ್ಕೆ ಬಿಬಿಎಂಪಿ ವಿಧೇಯಕ

Update: 2020-12-10 17:31 IST

ಬೆಂಗಳೂರು, ಡಿ. 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 198 ವಾರ್ಡ್‍ಗಳ ಸಂಖ್ಯೆಯನ್ನು 243ಕ್ಕೆ ಏರಿಕೆ, ಮೇಯರ್, ಉಪಮೇಯರ್ ಅಧಿಕಾರಾವಧಿ 12 ತಿಂಗಳಿಂದ 30 ತಿಂಗಳಿಗೆ ಹೆಚ್ಚಳ, ವಲಯಗಳ ಸಂಖ್ಯೆ 15ಕ್ಕೆ ಏರಿಕೆ, ವಲಯವಾರು ಶಾಸಕರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚನೆಗೆ ಅವಕಾಶ ಕಲ್ಪಿಸುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ-2020’ ಅನ್ನು ಕಾಂಗ್ರೆಸ್-ಜೆಡಿಎಸ್ ಸದಸ್ಯರ ಅನುಪಸ್ಥಿತಿಯಲ್ಲಿ ವಿಧಾನಸಭೆ ಒಪ್ಪಿಗೆ ನೀಡಿದೆ.

ಗುರುವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕವನ್ನು ಮಂಡಿಸಿದರು. ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಶಿಫಾರಸು ಮಾಡಿ ವರದಿ ಮಂಡನೆ ಮಾಡಿತ್ತು. ಈ ಸಮಿತಿಯ ವರದಿಯನ್ನೇ ಆಧರಿಸಿ ವಿಧೇಯಕ ಅಂಗೀಕಾರ ಮಾಡಲಾಗಿದೆ.

ಬಿಬಿಎಂಪಿಂ ಹೊರ ವಲಯದ 1.ಕಿ.ಮೀ ವ್ಯಾಪ್ತಿಯ ಗ್ರಾ.ಪಂ., ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ ಸೇರ್ಪಡೆ, 60-40 ವಿಸ್ತೀರ್ಣ ಮತ್ತು ಅದಕ್ಕೂ ಮೇಲ್ಪಟ್ಟ ಎಲ್ಲ ಮನೆಗಳಲ್ಲಿಯೂ ಮಳೆ ನೀರು ಕೊಯ್ಲು ಕಡ್ಡಾಯ ಮಾಡಲಾಗಿದೆ. ಕಲ್ಲು ಕ್ವಾರಿಗಳ ನಿಯಂತ್ರಣ ಅಧಿಕಾರವನ್ನು ಬಿಬಿಎಂಪಿಗೆ ನೀಡಲಾಗಿದೆ.

ನಗರದ ಜನಸಂಖ್ಯೆ ಹಾಗೂ ವಿಸ್ತೀರ್ಣವು ಹೆಚ್ಚಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು, ರಸ್ತೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಮತ್ತು ಸುಗಮ ಆಡಳಿತದ ದೃಷ್ಟಿಯಿಂದ ಈ ಬಿಬಿಎಂಪಿ ವಿಧೇಯಕವನ್ನು ತರಲಾಗಿದೆ. ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ವಿಧೇಯಕ ಬೆಂಬಲಿಸಿ ಮಾತನಾಡಿದ ಅರವಿಂದ ಲಿಂಬಾವಳಿ, ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ, ಮುನಿರತ್ನ, ನಗರದ ಹೊರ ವಲಯ ಗಳನ್ನು ಪಾಲಿಕೆಗೆ ಸೇರ್ಪಡೆ ಮಾಡಿ ವ್ಯಾಪ್ತಿ ಹೆಚ್ಚಳ ಮಾಡುವುದು ಸ್ವಾಗತಾರ್ಹ. ವಾರ್ಡ್‍ಗಳ ಪುನರ್ ವಿಂಗಡಣೆ ಮಾಡಬೇಕಿದ್ದು, ಜನರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ನೂತನ ಮಸೂದೆ ಅನುಕೂಲಕರ ಎಂದರು.

ಆ ಬಳಿಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್-ಜೆಡಿಎಸ್ ಸದಸ್ಯರ ಅನುಪಸ್ಥಿತಿಯಲ್ಲಿ ಮಹತ್ವದ ಬಿಬಿಎಂಪಿ ವಿಧೇಯಕಕ್ಕೆ ಮತಕ್ಕೆ ಹಾಕಿದ ಸಂದರ್ಭದಲ್ಲಿ ಬಿಬಿಎಂಪಿ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆಯಿತು. ಆದರೆ, ಬಿಬಿಎಂಪಿ ವಿಧೇಯಕಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಸದಸ್ಯರು ಆಗಿರುವ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ‘ವಿಧೇಯಕವನ್ನು ಪರಾಮರ್ಶೆಗೆ ಒಳಪಡಿಸಬೇಕು. ತಜ್ಞರ ಅಭಿಪ್ರಾಯ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ವಿಕೇಂದ್ರೀಕರಣಕ್ಕೆ ಪೂರಕವಾದ ವಿಧೇಯಕ ಸಿದ್ಧಪಡಿಸಬೇಕು. ಆದರೆ, ತರಾತುರಿಯಲ್ಲಿ ವಿಧೇಯಕವನ್ನು ತಂದಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದ್ದಾರೆ.

‘ಜಾಹೀರಾತಿನ ಮೇಲೆ ಯಾವುದೇ ತೆರಿಗೆ ವಿಧಿಸುವುದು ಅಲ್ಲದೆ, ಷರತ್ತುಗಳನ್ನು ಆಧರಿಸಿ ಒಂದು ವರ್ಷಕ್ಕೆ ಮೀರದ ಅವಧಿಗೆ ಗುತ್ತಿಗೆ ನೀಡಬಹುದು. ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಅಧಿಕಾರವನ್ನು ಪಾಲಿಕೆಗೆ ನೀಡಲಾಗಿದೆ. ಮನರಂಜನಾ ತೆರಿಗೆಯನ್ನು ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ’

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News