ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ: ನಟಿ ಸಂಜನಾ ವೈದ್ಯಕೀಯ ವರದಿ ಹೈಕೋರ್ಟ್‍ಗೆ ಸಲ್ಲಿಸಿದ ಸಿಸಿಬಿ

Update: 2020-12-10 14:48 GMT

ಬೆಂಗಳೂರು, ಡಿ.10: ಸ್ಯಾಂಡಲ್‍ವುಡ್ ಡ್ರ್ರಗ್ಸ್ ಜಾಲ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಅವರ ವೈದ್ಯಕೀಯ ವರದಿಯನ್ನು ಸಿಸಿಬಿ ಪೊಲೀಸರು ಹೈಕೋರ್ಟ್‍ಗೆ ಸಲ್ಲಿಸಿದರು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ.11ಕ್ಕೆ ಮುಂದೂಡಿದೆ.

ಜಾಮೀನು ಕೋರಿ ನಟಿ ಸಂಜನಾ ಗಲ್ರಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‍ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಸಿಸಿಬಿ ಪರ ಎಸ್‍ಪಿಪಿ ವೀರಣ್ಣ ತಿಗಡಿ ಅವರು, ಸಂಜನಾ ವೈದ್ಯಕೀಯ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.

ವರದಿ ಗಮನಿಸಿದ ಪೀಠ, ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದಿದ್ದಾರಲ್ಲ ಎಂದು ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಸಿಬಿ ಪರ ವಕೀಲ ವೀರಣ್ಣ ತಿಗಡಿ ಸದ್ಯಕ್ಕೆ ಮೆಡಿಕೇಷನ್‍ನಲ್ಲಿ ಮುಂದುವರೆಯಬಹುದು. ಅಗತ್ಯ ಬಿದ್ದರೆ ಮಾತ್ರ ಶಸ್ತ್ರ ಚಿಕಿತ್ಸೆ ಎಂದಿದ್ದಾರೆ ಎಂದು ವಿವರಿಸಿದರು.

ಹಾಗೆಯೇ ವಿಚಾರಣೆಯನ್ನು ನಾಳೆಗೆ ಮುಂದೂಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿತು.

ನಟಿ ಸಂಜನಾ ಗಲ್ರಾನಿ ತನಗೆ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇದೆ. ಚಳಿಗಾಲದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ. ಈ ಹಿಂದೆ ಒಂದು ಬಾರಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದೆ. ಹೀಗಾಗಿ, ಅಗತ್ಯ ಚಿಕಿತ್ಸೆ ಪಡೆಯಲು ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಹಿಂದಿನ ವಿಚಾರಣೆ ವೇಳೆ ಸಂಜನಾಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News