‘ದುಡಿಯುವ ನಮಗೆ ಸರಕಾರಿ ನೌಕರರು ಎನ್ನಿ’: ಸಾರಿಗೆ ನೌಕರರ ವಿಧಾನಸೌಧ ಚಲೋ

Update: 2020-12-10 15:46 GMT

ಬೆಂಗಳೂರು, ಡಿ.10: ಎಲ್ಲರಂತೆ ನಾವು ಸಹ ಕಷ್ಟಪಟ್ಟು ದುಡಿಯುವ ಮೂಲಕ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಅರಿತು ರಾಜ್ಯ ಸರಕಾರ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ಆಗ್ರಹಿಸಿದರು.

ಗುರುವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ಸಾರಿಗೆ ನೌಕರರು ಸರಕಾರಿ ನೌಕರರಾಗುವ ಹೋರಾಟದ ಒಕ್ಕೂಟ ನೇತೃತ್ವದಲ್ಲಿ ವಿಧಾನಸೌಧ ಚಲೋ ಚಳುವಳಿ ನಡೆಸಿದ ಸಾವಿರಾರು ನೌಕರರು, ಕೊರೋನ ಸೋಂಕಿನಿಂದ ಮೃತಪಟ್ಟವರನ್ನು ವಾರಿಯರ್ಸ್ ಎಂದು ಪರಿಗಣಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು 1 ಲಕ್ಷ 40 ಸಾವಿರ ಸಾರಿಗೆ ನೌಕರರು ಇದ್ದಾರೆ. ಆದರೆ ಅವರನ್ನೆಲ್ಲ ಸರಕಾರಿ ನೌಕರರು ಎಂದು ಘೋಷಣೆ ಮಾಡಿ, ಸಂಬಳ, ಇನ್ನಿತರ ಸೌಲಭ್ಯ ನೀಡಿದರೆ ಸರಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದ ನಷ್ಟವಾಗಲಿದೆ ಎನ್ನುವುದು ಸರಿಯಲ್ಲ. ಸಾರಿಗೆ ಸಂಸ್ಥೆಗಳು ಉತ್ತಮ ಲಾಭದೊಂದಿಗೆ ಚಲಿಸುತ್ತಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ನಷ್ಟ ಬರುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಸಮಾನ ವೇತನ ನೀಡಬೇಕು. ಕೆಎಸ್ಸಾರ್ಟಿಸಿ ಸರಕಾರದ ಒಡೆತನದ ಸಂಸ್ಥೆಯಾಗಿದ್ದೂ ದೇಶದಲ್ಲಿಯೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದಕ್ಕೆ ಸರಕಾರ ಅಗತ್ಯ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ದೂರಿದರು.

ಸಾರಿಗೆ ನೌಕರರ ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಹೋರಾಟ ನ್ಯಾಯಯುತವಾಗಿದ್ದು ರಾಜ್ಯ ಸರಕಾರ ಕೂಡಲೇ ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಕೋವಿಡ್ ಸಂದರ್ಭದಲ್ಲಿ ಸಾರಿಗೆ ನೌಕರರು ಪೊಲೀಸರಂತೆ ಯೋಧರಾಗಿ ಕೆಲಸ ಮಾಡಿದ್ದಾರೆ ಕೆಲಸದ ವೇಳೆ ಸೋಂಕಿಗೆ ತುತ್ತಾದ ನೌಕರರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ನಡೆಸಿದ ಕಾಲ್ನಡಿಗೆ ಜಾಥಾದಲ್ಲಿ ನೌಕರರು ಕುಟುಂಬ ಸದಸ್ಯರು ಪಾಲ್ಗೊಂಡು ಗಮನ ಸೆಳೆದರು.

ಬೇಡಿಕೆಗಳೇನು?
► ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಘೋಷಿಸಬೇಕು.
► ಸರಕಾರಿ ನೌಕರರ ಸವಲತ್ತುಗಳನ್ನು ಸಾರಿಗೆ ನೌಕರರಿಗೂ ನೀಡಬೇಕು.
► ಸರಕಾರಿ ನೌಕರರ ವೇತನ ಶ್ರೇಣಿಯನ್ನು ಇತರೆ ನೌಕರರಿಗೂ ಅನುಸರಿಸಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News