ರಾಜಸ್ಥಾನದ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಭಾರತೀಯ ಟ್ರೈಬಲ್ ಪಾರ್ಟಿ

Update: 2020-12-11 11:42 GMT

ಜೈಪುರ: ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಯು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಹೊಸ ತಲೆನೋವು ತಂದಿದೆ. ಇದೀಗ ಭಾರತೀಯ ಟ್ರೈಬಲ್ ಪಕ್ಷದ (ಬಿಟಿಪಿ)ಇಬ್ಬರು ಶಾಸಕರು ರಾಜಸ್ಥಾನದಲ್ಲಿ ಗೆಹ್ಲೋಟ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ.

 ಕಳೆದ ಕೆಲವು ದಿನಗಳಲ್ಲಿ ನಡೆದ ಎರಡು ಮುಖ್ಯ ಬೆಳವಣಿಗೆಗಳು ಬಿಟಿಪಿ ಪಕ್ಷ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲ ಹಿಂಪಡೆಯಲು ಕಾರಣವಾಗಿದೆ. ಈ ವರ್ಷಾರಂಭದಲ್ಲಿ ಸಚಿನ್ ಪೈಲಟ್ ಬಂಡಾಯ ಎದ್ದಾಗ ಗೆಹ್ಲೋಟ್ ಸರಕಾರಕ್ಕೆ ಬೆಂಬಲ ನೀಡಲು ಬಿಟಿಪಿಯ ಇಬ್ಬರು ಶಾಸಕರು ತಲಾ 10 ಕೋ.ರೂ. ಪಡೆದಿದ್ದರು ಎಂದು ಕಾಂಗ್ರೆಸ್ ಶಾಸಕ ಮಹೇಂದ್ರಜೀತ್ ಸಿಂಗ್ ಮಾಳವೀಯ ಆರೋಪಿಸಿದ್ದರು. ಮಾಳವೀಯ ಆರೋಪಿಸುತ್ತಿರುವ ವೀಡಿಯೊವನ್ನು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ನವೆಂಬರ್ ಅಂತ್ಯದಲ್ಲಿ ಟ್ವೀಟಿಸಿದ್ದರು.

ಆ ಬಳಿಕ ದುಂಗಾಪುರದಲ್ಲಿ ಜಿಲ್ಲಾ ಪ್ರಮುಖ ಹುದ್ದೆಗೆ ಬಿಟಿಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಣದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಬಿಜೆಪಿಯ ಅಭ್ಯರ್ಥಿಗೆ ಬೆಂಬಲ ನೀಡಿ ಗೆಲ್ಲಿಸಿತ್ತು. ಕಾಂಗ್ರೆಸ್ ಕೌನ್ಸಿಲರ್ ಗಳು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದರು. ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಗೆದ್ದಿದ್ದರೂ 27 ಸದಸ್ಯಬಲದ ದುಂಗಾಪುರ ಜಿಲ್ಲಾ ಪರಿಷತ್ ನಲ್ಲಿ ಜಿಲ್ಲಾ ಪ್ರಮುಖ ಸ್ಥಾನವನ್ನು ಗೆದ್ದುಕೊಂಡಿದೆ.

ಇದು ವಿಶ್ವಾಸ ದ್ರೋಹ. ಕಾಂಗ್ರೆಸ್‌ನ್ನು ಯಾವತ್ತೂ ನಂಬಬಾರದು. ಭವಿಷ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ತಾನು ಕೈಜೋಡಿಸುವುದಿಲ್ಲ ಎಂದು ಬಿಟಿಪಿ ಹೇಳಿದೆ.

ಬಿಟಿಪಿ ಪಕ್ಷವು ಗೆಹ್ಲೋಟ್ ಸರಕಾರವು ವಿಶ್ವಾಸಮತ ಯಾಚಿಸಿದ ಸಂದರ್ಭ ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News