ರಶ್ಯದ ಲಸಿಕೆ ಜೊತೆ ಆ್ಯಸ್ಟ್ರಝೆನೆಕ ಲಸಿಕೆ ಸಂಯೋಜನೆ

Update: 2020-12-11 17:10 GMT

ಲಂಡನ್, ಡಿ. 11: ತನ್ನ ಪ್ರಾಯೋಗಿಕ ಕೋವಿಡ್-19 ಲಸಿಕೆ ಮತ್ತು ರಶ್ಯದ ‘ಸ್ಪೂಟ್ನಿಕ್-5’ ಪ್ರಾಯೋಗಿಕ ಲಸಿಕೆಯನ್ನು ಸಂಯೋಜಿಸಿದರೆ ಹೇಗೆ ಎಂಬ ಬಗ್ಗೆ ಸಂಶೋಧನೆ ಮಾಡುವುದಾಗಿ ಬ್ರಿಟನ್‌ನ ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿ ಶುಕ್ರವಾರ ಹೇಳಿದೆ. ಹೀಗೆ ಮಾಡಿದರೆ ಲಸಿಕೆಯ ಪರಿಣಾಮ ಗಣನೀಯವಾಗಿ ಹೆಚ್ಚುತ್ತದೆ ಎಂಬ ಸಲಹೆಯನ್ನು ರಶ್ಯದ ವಿಜ್ಞಾನಿಗಳು ಇತ್ತೀಚೆಗೆ ನೀಡಿದ್ದರು.

ವಿಭಿನ್ನ ಲಸಿಕೆಗಳ ಸಂಯೋಜನೆ ಸಾಧ್ಯತೆಗಳ ಬಗ್ಗೆ ತಾನು ಪರಿಶೀಲಿಸುತ್ತಿರುವುದಾಗಿ ಆ್ಯಸ್ಟ್ರಝೆನೆಕ ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಾಗಾಗಿ, ಸ್ಪೂಟ್ನಿಕ್-5 ಪ್ರಾಯೋಗಿಕ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ರಶ್ಯದ ಗಮಲೇಯ ಇನ್‌ಸ್ಟಿಟ್ಯೂಟ್‌ನೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅದು ಹೇಳಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೊತೆಗೆ ಆ್ಯಸ್ಟ್ರಝೆನೆಕ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಸರಾಸರಿ 70.4 ಶೇಕಡ ಪರಿಣಾಮಕಾರಿ ಎನ್ನುವುದನ್ನು ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಅಂಕಿಅಂಶಗಳು ತಿಳಿಸಿವೆ.

ತನ್ನ ‘ಸ್ಪೂಟ್ನಿಕ್-5’ ಲಸಿಕೆಯು ಕೋವಿಡ್-19ರಿಂದ ಜನರನ್ನು ರಕ್ಷಿಸುವಲ್ಲಿ 92 ಶೇಕಡ ಪರಿಣಾಮಕಾರಿ ಎಂದು ರಶ್ಯ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News