ಕಾರ್ತಿ ಚಿದಂಬರಂ ದಂಪತಿ ವಿರುದ್ಧದ ಕಾನೂನು ಕ್ರಮ ರದ್ದುಗೊಳಿಸಿದ ಹೈಕೋರ್ಟ್

Update: 2020-12-12 14:52 GMT

ಚೆನ್ನೈ, ಡಿ.12: ಚೆನ್ನೈ ಬಳಿಯಿದ್ದ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ 7 ಕೋಟಿ ಮೊತ್ತದ ವ್ಯವಹಾರದ ಬಗ್ಗೆ ಮಾಹಿತಿ ಬಚ್ಚಿಟ್ಟ ಆರೋಪದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಹಾಗೂ ಅವರ ಪತ್ನಿಯ ವಿರುದ್ಧ ಆದಾಯ ತೆರಿಗೆ ಇಲಾಖೆ ಜರಗಿಸಿದ್ದ ಕಾನೂನು ಕ್ರಮ ಅಸಿಂಧು ಎಂದು ಘೋಷಿಸಿರುವ ಮದ್ರಾಸ್ ಹೈಕೋರ್ಟ್, ಅದನ್ನು ರದ್ದುಗೊಳಿಸಿದೆ.

ಮುಟ್ಟುಕಾಡು ಪ್ರದೇಶದ ಬಳಿ ಹೊಂದಿದ್ದ ಜಮೀನನ್ನು ಮಾರಾಟ ಮಾಡಿರುವ ಕಾಂಗ್ರೆಸ್ ಸಂಸದ ಕಾರ್ತಿ ಮತ್ತವರ ಪತ್ನಿ, ಇದರಿಂದ ಕ್ರಮವಾಗಿ 6.38 ಕೋಟಿ ಮತ್ತು 1.35 ಕೋಟಿ ಸ್ವೀಕರಿಸಿದ್ದರೂ ಈ ಬಗ್ಗೆ ಆದಾಯ ತೆರಿಗೆ ಪರಿಷ್ಕರಣೆ ಸಂದರ್ಭ ಮಾಹಿತಿ ನೀಡದೆ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ಕ್ರಿಮಿನಲ್ ಕಾನೂನು ಕ್ರಮ ಆರಂಭಿಸಿತ್ತು.

ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ತೆರಿಗೆ ಮೌಲ್ಯಮಾಪನ ಅಧಿಕಾರಿ ಕಾನೂನು ಕ್ರಮ ಜರಗಿಸಬೇಕು. ಆದರೆ ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯ ಉಪನಿರ್ದೇಶಕರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇಲ್ಲಿ ಪ್ರಕ್ರಿಯಾತ್ಮಕ ಲೋಪವಿರುವುದರಿಂದ ಕಾನೂನು ಕ್ರಮವನ್ನು ರದ್ದುಗೊಳಿಸಬೇಕು ಎಂದು ಕಾರ್ತಿ ಚಿದಂಬರಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಲಾಖೆಯ ಕಾನೂನು ಕ್ರಮ ಅಸಮರ್ಥನೀಯ ಮತ್ತು ಅಕಾಲಿಕ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾಯಪೀಠ, ಸಂಬಂಧಿತ ಪ್ರಾಧಿಕಾರ ಸರಿಯಾದ ಮೌಲ್ಯಮಾಪನದ ನಡೆಸಿದ ಬಳಿಕ ಅಗತ್ಯವಿದ್ದರೆ ಕಾನೂನು ಕ್ರಮ ಜರಗಿಸಬಹುದು ಎಂದು ತಿಳಿಸಿ ಕಾನೂನು ಕ್ರಮವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News