ದೇಶದ ಪ್ರಗತಿಯಲ್ಲಿ ಯುವ ಶಕ್ತಿಯ ಪಾತ್ರ ಮಹತ್ವದ್ದು: ಸಚಿವ ಬಿ.ಎ.ಬಸವರಾಜ

Update: 2020-12-12 16:26 GMT

ಬೆಂಗಳೂರು, ಡಿ.12: ದೇಶವು ಸರ್ವ ವಲಯಗಳಲ್ಲೂ ಶಕ್ತಿಶಾಲಿಯಾಗಿ ಹೊರ ಹೊಮ್ಮಲು ಯುವ ಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರಲ್ಲಿರುವ ಕೌಶಲ್ಯ, ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದರು.

ಶನಿವಾರ ಕೆ.ಆರ್.ಪುರ ಕ್ಷೇತ್ರದ ಕಲ್ಕೆರೆ ಎನ್.ಆರ್.ಐ.ಬಡಾವಣೆಯಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನಿರೀಕ್ಷಿತವಾಗಿ ಎದುರಾದ ಕೋವಿಡ್ ಸಾಂಕ್ರಮಿಕದಿಂದ ಕೇವಲ ನಮ್ಮ ದೇಶ ಅಷ್ಟೇ ಅಲ್ಲ, ಇಡೀ ವಿಶ್ವ ತಲ್ಲಣಿಸಿದೆ. ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಗಳೂ ಸಮಸ್ಯೆಗಳನ್ನು ಎದುರಿಸಿದವು. ಅದೇ ರೀತಿ ನಮ್ಮ ದೇಶದಲ್ಲಿಯೂ ಸಾಕಷ್ಟು ಸಮಸ್ಯೆಗಳು ಉಂಟಾದವು. ಸಾವಿರಾರು ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು ಎಂದು ಅವರು ಹೇಳಿದರು.

ಪ್ರತಿಭಾವಂತ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ, ಅವರನ್ನು ರಾಷ್ಟç ನಿರ್ಮಾಣದ ಕಾಯಕದಲ್ಲಿ ತೊಡಗಿಕೊಳ್ಳುವಂತೆ ಮಾಡಲು ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಆಯೋಜಿಸಿರುವ ಈ ಬೃಹತ್ ಉದ್ಯೋಗ ಮೇಳ ಸಹಕಾರಿಯಾಗಲಿದೆ ಎಂದು ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.

ಈ ಉದ್ಯೋಗ ಮೇಳದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಐಬಿಎಂ, ಇನ್ಫೋಸಿಸ್, ಬಾಷ್ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿವೆ. ಸುಮಾರು ೫ ಸಾವಿರ ಮಂದಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಕೋವಿಡ್ ಲಾಕ್‌ಡೌನ್ ಸರಳೀಕರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಲು ಉದ್ಯೋಗ ಅವಕಾಶಗಳು ಹೆಚ್ಚಬೇಕಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಕೇಶವ್ ಪ್ರಸಾದ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಮುಖಂಡರಾದ ಕೆ.ಮಾದೇಶ್, ಪಿ.ಜೆ.ಅಂತೋಣಿಸ್ವಾಮಿ, ಬಾಕ್ಸರ್ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News