ರೋಹಿತ್ ಶರ್ಮಾ ‘ಪ್ರಾಯೋಗಿಕವಾಗಿ ಫಿಟ್’: ಬಿಸಿಸಿಐ

Update: 2020-12-13 07:17 GMT

ಹೊಸದಿಲ್ಲಿ: ಹಿರಿಯ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಆಸ್ಟ್ರೇಲಿಯದಲ್ಲಿ ಭಾರತ ತಂಡವನ್ನು ಸೇರಲು ಪ್ರಾಯೋಗಿಕವಾಗಿ ಸಮರ್ಥರು ಎಂದು ಬಿಸಿಸಿಐ ಶನಿವಾರ ಘೋಷಿಸಿದೆ ತಂಡದ ವೈದ್ಯಕೀಯ ತಂಡ ನೀಡುವ ವರದಿಯ ಆಧಾರದಲ್ಲಿ ಟೆಸ್ಟ್ ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಭಾಗವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿದೆ.

ಐಪಿಎಲ್ ಸಮಯದಲ್ಲಿ ರೋಹಿತ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಇದೀಗ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ತಂಡದಿಂದ ಹೊರಗುಳಿದಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಪ್ರಾರಂಭವಾಗುತ್ತದೆ.

 ಎರಡು ವಾರಗಳ ಕ್ವಾರಂಟೈನ್ ನಿಯಮವನ್ನು ಅನುಸರಿಸಲು ವಿವರವಾದ ಕಾರ್ಯಕ್ರಮವನ್ನು ಅವರಿಗೆ ನೀಡಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ (ಎನ್‌ಸಿಎ) ರೋಹಿತ್ ಶರ್ಮಾರ ಫಿಟ್‌ನೆಸ್ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿದ್ದು, ಅವರು ತಂಡ ಸೇರಲು ಸಮರ್ಥರಾಗಿದ್ದಾರೆ.ಡಿಸೆಂಬರ್ 14 ರಂದು ಅವರು ಆಸ್ಟ್ರೇಲಿಯಕ್ಕೆ ತೆರಳಲಿದ್ದಾರೆ.

 ರೋಹಿತ್ ಶರ್ಮಾ ಅವರು ಬೆಂಗಳೂರಿನ ಎನ್‌ಸಿಎದಲ್ಲಿ ಪುನರ್ವಸತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈಗ ಪ್ರಾಯೋಗಿಕವಾಗಿ ಸದೃಢರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅವಧಿ ಯಲ್ಲಿ ಉನ್ನತ ದರ್ಜೆಯ ಮಂಡಿರಜ್ಜು ಗಾಯದ ಹಿನ್ನೆಲೆಯಲ್ಲಿ ಅವರು ನವೆಂಬರ್ 19ರಿಂದ ಎನ್‌ಸಿಎದಲ್ಲಿ ಪುನರ್ವಸತಿ ಮತ್ತು ತರಬೇತಿ ಪಡೆಯುತ್ತಿದ್ದರು. ರೋಹಿತ್ ಅವರ ಫಿಟ್‌ನೆಸ್ ಪರೀಕ್ಷೆ ಎನ್‌ಸಿಎ ನಿರ್ದೇಶಕ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು. ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡುವ ಜವಾಬ್ದಾರಿ ಯನ್ನು ಅವರಿಗೆ ವಹಿಸಲಾಗಿತ್ತು.

 ಎನ್‌ಸಿಎವೈದ್ಯಕೀಯ ತಂಡವು ಶರ್ಮ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ತೃಪ್ತಿ ಹೊಂದಿದ್ದು, ಬ್ಯಾಟಿಂಗ್, ಫೀಲ್ಡಿಂಗ್ ರನ್ನಿಂಗ್ ಸಂಬಂಧಿಸಿದ ಕೌಶಲ್ಯಗಳನ್ನು ಹೊಂದಿದ್ದಾರೆ.

ಶರ್ಮಾ ಅವರ ದೈಹಿಕ ಸಾಮರ್ಥ್ಯವು ತೃಪ್ತಿಕರವಾಗಿದೆ ಎಂದು ಬಿಸಿಸಿಐ ತಿಳಿಸಿದೆ.

 ಆಸ್ಟ್ರೇಲಿಯ ಸರಕಾರದ ನಿಯಮಗಳ ಪ್ರಕಾರ, ಸಿಡ್ನಿ (ಜನವರಿ 7 ರಿಂದ 11) ಮತ್ತು ಬ್ರಿಸ್ಬೇನ್‌ನಲ್ಲಿ (ಜನವರಿ 15 ರಿಂದ 19) ಕೊನೆಯ ಎರಡು ಟೆಸ್ಟ್‌ಗಳಿಗೆ ಅಭ್ಯಾಸ ಆರಂಭಿಸುವ ಮೊದಲು ಸ್ಟಾರ್ ಬ್ಯಾಟ್ಸ್ ಮನ್ ಕಡ್ಡಾಯವಾಗಿ 14 ದಿನಗಳ ಕಠಿಣ ನಿರ್ಬಂಧವನ್ನು ಎದುರಿಸಬೇಕಾಗುತ್ತದೆ.

 ಕಳೆದ ಕೆಲವು ವಾರಗಳಿಂದ ರೋಹಿತ್ ಅವರ ಸ್ಥಾನಮಾನದ ಬಗ್ಗೆ ಗೊಂದಲವಿತ್ತು. ಈ ಗಾಯವು ಅವರನ್ನು ಐಪಿಎಲ್‌ನ 4 ಪಂದ್ಯಗಳಿಂದ ದೂರ ಉಳಿಯುವಂತೆ ಮಾಡಿತ್ತು. ಆದರೆ ಐಪಿಎಲ್ ಫೈನಲ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿದ್ದರು. ಇದು ಅವರ ಫಿಟನೆಸ್ ಬಗ್ಗೆ ಸಂಶಯಕ್ಕೆ ಕಾರಣವಾಗಿತ್ತು. ಐಪಿಎಲ್ ಮುಗಿದ ಬಳಿಕ ಉಪನಾಯಕನಾಗಿ ತನ್ನ ರಾಷ್ಟ್ರೀಯ ತಂಡದ ಆಟಗಾರರೊಂದಿಗೆ ನೇರವಾಗಿ ಆಸ್ಟ್ರೇಲಿಯಕ್ಕೆ ಪ್ರಯಾಣಿಸುವ ಬದಲು ಮುಂಬೈಗೆ ಆಗಮಿಸಿದ್ದರು. ತಂದೆಯ ಅನಾರೋಗ್ಯದ ಕಾರಣದಿಂದಾಗಿ ರೋಹಿತ್ ಶರ್ಮಾ ತವರಿಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News