ಕನಿಷ್ಠ ಬೆಂಬಲ ಬೆಲೆ: ಕಾನೂನಾತ್ಮಕ ಖಾತರಿಗೆ ಆರೆಸ್ಸೆಸ್ ಸಹಸಂಸ್ಥೆ ಪಟ್ಟು

Update: 2020-12-14 04:13 GMT
ಫೈಲ್ ಪೋಟೊ

ಹೊಸದಿಲ್ಲಿ, ಡಿ.14: ಕೇಂದ್ರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ರವಿವಾರ ಆರೆಸ್ಸೆಸ್ ಸಹಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್‌ನಿಂದ ಬೆಂಬಲ ಸಿಕ್ಕಿದ್ದು, ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಆಹಾರ ಖರೀದಿಸುವುದನ್ನು ಖಾತರಿಪಡಿಸುವ ಕಾನೂನಾತ್ಮಕ ಖಾತರಿ ಬೇಕು ಎಂದು ಪಟ್ಟು ಹಿಡಿದಿದೆ.

ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತ ಹೋರಾಟವನ್ನು ಆರೆಸ್ಸೆಸ್ ಸಂಪರ್ಕದ ಬಿಕೆಎಸ್ ಬೆಂಬಲಿಸಿದ ಬಳಿಕ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವ ಆರೆಸ್ಸೆಸ್ ಜತೆ ಸಂಪರ್ಕ ಹೊಂದಿದ ಎರಡನೇ ಸಂಘಟನೆ ಇದಾಗಿದೆ. ಆದರೆ ಪ್ರತಿಭಟನಾನಿರತ ರೈತರಂತೆ ಈ ಸಂಘಟನೆಗಳು ಹೊಸ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿಲ್ಲ. ವರ್ಚುವಲ್ ವಿಧಾನದ ಮೂಲಕ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಈ ಕುರಿತು ನಿರ್ಣಯ ಆಂಗೀಕರಿಸಿರುವ ಎಸ್‌ಜೆಎಂ, "ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸುವುದನ್ನು ಕಾನೂನುಬಾಹಿರಗೊಳಿಸಬೇಕು" ಎಂದು ಒತ್ತಾಯಿಸಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಸುವ ಬಗ್ಗೆ ಲಿಖಿತ ಭರವಸೆ ನೀಡಲು ಸಿದ್ಧ ಎಂದು ಸರಕಾರ ಹೇಳಿದೆ.

ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಹಾಲಿ ಇರುವ ಕೃಷಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಥವಾ ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸುವ ಖಾತರಿ ನೀಡಬೇಕು ಎಂದು ಎಸ್‌ಜೆಎಂ ಸಹ ಸಂಚಾಲಕ ಅಶ್ವನಿ ಮಹಾಜನ್ ಆಗ್ರಹಿಸಿದ್ದಾರೆ.

"ಕನಿಷ್ಠ ಬೆಂಬಲ ಬೆಲೆ ನೀತಿ ರೈತರ ಹಿತದೃಷ್ಟಿಯಿಂದ ಮಾತ್ರ ಪ್ರಮುಖವಲ್ಲ; ದೇಶದ ಆಹಾರ ಭದ್ರತೆ ದೃಷ್ಟಿಯಿಂದಲೂ ಅನಿವಾರ್ಯ ಎನ್ನುವುದು ನಮ್ಮ ನಂಬಿಕೆ. ಕೆಲ ಅರ್ಥಶಾಸ್ತ್ರಜ್ಞರು ಅಂದಾಜಿಸುವಂತೆ ಇದು ಹಣದುಬ್ಬರ ಹೆಚ್ಚಿಸುವ ಸಾಧ್ಯತೆ ಇಲ್ಲ. ಬೇಳೆಕಾಳುಗಳಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ದರ ಇರುವುದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾಗಿದ್ದಾರೆ. ಇದು ಗ್ರಾಹಕರಿಗೆ ಬೆಲೆ ಕಡಿಮೆಯಾಗಲು ಹಾಗೂ ದೇಶದ ಆಮದು ಬಿಲ್ ಕಡಿತಕ್ಕೂ ನೆರವಾಗಿದೆ. ಕನಿಷ್ಠ ಬೆಂಬಲ ಬೆಲೆ ನಿಗದಿ ಖಾತರಿಯಿಂದ ಎಲ್ಲರಿಗೂ ಲಾಭವಾಗಲಿದೆ" ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News