ಹಿರಿಯ ಸಾಹಿತಿ, ಸಮಾಜ ಸೇವಕಿ ಎ.ಪಂಕಜ ನಿಧನ

Update: 2020-12-14 16:02 GMT

ಬೆಂಗಳೂರು, ಡಿ.14: ಹಿರಿಯ ಸಾಹಿತಿ, ಸಮಾಜ ಸೇವಕಿ ಎ. ಪಂಕಜ ಅವರು ಸೋಮವಾರ ನಿಧರಾಗಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ 1932 ರ ಎಪ್ರಿಲ್ 20 ರಂದು ಜನಿಸಿದ್ದ ಅವರು, ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದಿದ್ದರು. ಓದಿದ್ದು ಇಂಟರ್ ಮೀಡಿಯಟ್ ಆದರೂ ಹಿಂದಿ ಭಾಷೆಯಲ್ಲಿ ವಿದ್ವಾನ್ ಪದವಿ ಪಡೆದಿದ್ದರು. ಇಂಗ್ಲಿಷ್, ಹಿಂದಿ, ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದಿರುವ, ದುರ್ಬಲ ವರ್ಗದ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರ ಉನ್ನತಿಗಾಗಿ ಬ್ಯಾಂಕೊಂದರ ಅವಶ್ಯಕತೆಯನ್ನು ಮನಗಂಡು, ‘ಮಹಿಳಾ ಕೋ ಆಪರೇಟಿವ್ ಬ್ಯಾಂಕ್’ ಅನ್ನು ಸ್ಥಾಪನೆ ಮಾಡಿದ್ದರು. ಬೆಂಗಳೂರು ನಗರದ ಪ್ರಮುಖ ಬಡಾವಣೆಯಲ್ಲಿ ಆರಂಭವಾದ ಈ ಬ್ಯಾಂಕ್‍ನಲ್ಲಿ ಶೇ. 80 ರಷ್ಟು ಶೇರುದಾರರು ಮಹಿಳೆಯರೇ ಆಗಿದ್ದಾರೆ. ಸ್ವಾವಲಂಬಿಗಳಾಗಿ ಬದುಕಲು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ.

ಅವರ ಸಮಾಜಮುಖಿ ಹಾಗೂ ಸಾಹಿತ್ಯ ಕೆಲಸಗಳಿಗಾಗಿ ಸರೋಜ ದೇವಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ನೇತಾಜಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಸಿಎಂ ಸಂತಾಪ: ಹಿರಿಯ ಸಾಹಿತಿ ಎ.ಪಂಕಜ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ 50ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿರುವ ಪಂಕಜ ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸಾಮಾಜಿಕ, ಪೌರಾಣಿಕ, ಪತ್ತೇದಾರಿ ಹೀಗೆ ವಿವಿಧ ಪ್ರಕಾರದ ಕಾದಂಬರಿಗಳ ಮೂಲಕ ಮನೆ ಮಾತಾದವರು. ಸಾಹಿತ್ಯದೊಂದಿಗೆ, ಶಿಕ್ಷಕಿಯಾಗಿ, ಮಹಿಳಾ ಸಹಕಾರ ಬ್ಯಾಂಕ್ ಸಂಸ್ಥಾಪಕರಾಗಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ. ಅವರ ನಿಧನದಿಂದ ಬಹುಮುಖ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಡಿಸಿಎಂ ಸಂತಾಪ: ಹಿರಿಯ ಸಾಹಿತಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿದ್ದ ಎ.ಪಂಕಜ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ. ಕನ್ನಡ ಕಾದಂಬರಿ ಪ್ರಕಾರದಲ್ಲಿ ಪಂಕಜ ಅವರದ್ದು ಬಹುದೊಡ್ಡ ಹೆಸರು. ಸುಮಾರು 50ಕ್ಕೂ ಕಾದಂಬರಿಗಳನ್ನು ರಚಿಸಿ, ಅವುಗಳಲ್ಲಿ ಸ್ತ್ರೀಪರ ಸಂವೇದನೆ, ತಲ್ಲಣ ಹಾಗೂ ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಚಿತ್ರಿಸಿದ್ದಾರೆ. ಶಿಕ್ಷಕಿಯಾಗಿ, ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಕಿಯಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ ಎಂದು ಸ್ಮರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News