ಲಂಚಕ್ಕೆ ಬೇಡಿಕೆ ಆರೋಪ: ಬಿಬಿಎಂಪಿ ಆರೋಗ್ಯಾಧಿಕಾರಿ ಎಸಿಬಿ ಬಲೆಗೆ
Update: 2020-12-14 21:48 IST
ಬೆಂಗಳೂರು, ಡಿ.14: ಮಳಿಗೆಯೊಂದು ಆರಂಭಿಸುವ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಯನಗರ 4ನೇ ಬ್ಲಾಕ್‍ನ ಆರೋಗ್ಯಾಧಿಕಾರಿ ಲೋಕೇಶ್ ಎಂಬುವರ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಜಯನಗರ 4ನೇ ಬ್ಲಾಕ್‍ನ ರಸ್ತೆಯಲ್ಲಿ ಪಾದರಕ್ಷೆಗಳ ಮಳಿಗೆಯೊಂದನ್ನು ಆರಂಭಿಸುವ ಸಲುವಾಗಿ ಪರವಾನಿಗೆಗಾಗಿ ಆರೋಗ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆರೋಗ್ಯಾಧಿಕಾರಿ ಲೋಕೇಶ್, ಪರವಾನಿಗೆ ಪತ್ರ ವಿತರಣೆ ಮಾಡಲು 15 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ದಾಖಲಾದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಸೋಮವಾರ ಲೋಕೇಶ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಸೆರೆ ಹಿಡಿದಿದ್ದಾರೆ.